ಮಡಿಕೇರಿ ಅ.15 : ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಹಿನ್ನೆಲೆ ಶ್ರೀ ಭಾಗಮಂಡಲ ಭಗಂಡೇಶ್ವರ ಮತ್ತು ತಲಕಾವೇರಿ ಪವಿತ್ರ ಕ್ಷೇತ್ರದಲ್ಲಿ ಸಿದ್ಧತೆಗಳು ಭರದಿಂದ ಸಾಗಿದೆ.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಶಾಸಕ ಎ.ಎಸ್.ಪೊನ್ನಣ್ಣ ಅವರು ಭಾನುವಾರ ಭಾಗಮಂಡಲ ಭಗಂಡೇಶ್ವರ ದೇವಾಲಯ, ತ್ರಿವೇಣಿ ಸಂಗಮ ಹಾಗೆಯೇ ತಲಕಾವೇರಿ ಕೇತ್ರಕ್ಕೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಎನ್.ಎಸ್.ಭೋಸರಾಜು ಅವರು ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಸಂಬಂಧ ಭಾಗಮಂಡಲ ದೇವಾಲಯದಲ್ಲಿ ನಂದಾದೀಪ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು, ತಕ್ಕ ಮುಖ್ಯಸ್ಥರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕ್ಷಯ ಪಾತ್ರೆ ಇರಿಸಿದರು.
ನಂತರ ಭಾಗಮಂಡಲದ ಭಗಂಡೇಶ್ವರ, ಮಹಾಗಣಪತಿ, ಸುಬ್ರಮಣ್ಯ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ತ್ರಿವೇಣಿ ಸಂಗಮಕ್ಕೆ ಭೇಟಿ ನೀಡಿ ಅಲ್ಲಿನ ಸಿದ್ಧತೆಗಳನ್ನು ಪರಿಶೀಲಿಸಿ, ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಸಾಂಸ್ಕೃತಿಕ ಗೀತಾ ಗಾಯನ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಾಣ, ಭಕ್ತಾಧಿಗಳ ಅನುಕೂಲಕ್ಕಾಗಿ ಬ್ಯಾರಿಕೇಡ್ ನಿರ್ಮಾಣ, ಅಗತ್ಯ ವ್ಯವಸ್ಥೆಗಳು ಮತ್ತಿತರ ಸಿದ್ಧತೆ ಬಗ್ಗೆ ಮಾಹಿತಿ ಪಡೆದರು.
ಹಾಗೆಯೇ ನಾಡಿನ ಜೀವನದಿ, ಕಾವೇರಿ ನದಿ ಉಗಮ ಸ್ಥಾನ ತಲಕಾವೇರಿಯಲ್ಲಿ ಇದೇ ಸಂದರ್ಭದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಸಂಬಂಧಿಸಿದಂತೆ ಸಿದ್ಧತೆ ಬಗ್ಗೆ ಹಲವು ಮಾಹಿತಿ ನೀಡಿದರು.
ಬಳಿಕ ಮಾತನಾಡಿದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಸಂಬಂಧ ಒಂದು ತಿಂಗಳಿನಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭಕ್ತಾಧಿಗಳಿಗೆ ಅಗತ್ಯ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ವಾಹನ ನಿಲುಗಡೆ, ಭಾಗಮಂಡಲದಿಂದ ತಲಕಾವೇರಿಯವರೆಗೆ, ತಲಕಾವೇರಿಯಿಂದ ಭಾಗಮಂಡಲದವರೆಗೆ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಅಗತ್ಯ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ. ಹಿಂದಿನಂತೆ ಅನ್ನದಾನ ನಡೆಯಲಿದೆ. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಭಾಗಮಂಡಲದಿಂದ ತಲಕಾವೇರಿ ವರೆಗೆ ವಿದ್ಯುತ್ ದೀಪ, ಹೀಗೆ ಹಲವು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಭಕ್ತಾಧಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವೈದ್ಯರು ಮತ್ತು ಶ್ರುಶ್ರೂಷಕರ ನಿಯೋಜನೆ, ಆಂಬ್ಯುಲೆನ್ಸ್ ಸೌಲಭ್ಯ ಕಲ್ಪಿಸಲಾಗುತ್ತದೆ. ಭಕ್ತಾಧಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಲಾಗುವುದು ಎಂದು ಸಚಿವರು ಹೇಳಿದರು.
ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ ಪವಿತ್ರ ಸ್ಥಳದಲ್ಲಿ ಪ್ಲಾಸ್ಟಿಕ್‌ನ್ನು ಬಳಸಬಾರದು. ಸ್ವಪ್ರೇರಣೆಯಿಂದ ಭಕ್ತಾಧಿಗಳೇ ಪ್ಲಾಸ್ಟಿಕ್‌ನ್ನು ನಿಯಂತ್ರಿಸಬೇಕು. ಆ ನಿಟ್ಟಿನಲ್ಲಿ ಶುಚಿತ್ವಕ್ಕೆ ಒತ್ತು ನೀಡಬೇಕು ಎಂದು ಕೋರಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್ ಅವರು ಮಾಹಿತಿ ನೀಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, 2 ಡಿವೈಎಸ್‌ಪಿ, 9 ಪೊಲೀಸ್ ಇನ್ಸ್ಪೆಕ್ಟರ್, 15 ಸಬ್ ಇನ್ಸ್ಪೆಕ್ಟರ್‌ಗಳು, 30 ಮಂದಿ ಸಹಾಯಕ ಸಬ್ ಇನ್ಸ್ಪೆಕ್ಟರ್‌ಗಳು, 350 ಹೆಡ್‌ಕಾನ್ಸಟೇಬಲ್, ಅಗತ್ಯ ಪೊಲೀಸರು, ಜೊತೆಗೆ ಗೃಹ ರಕ್ಷಕದಳದವರು ಕರ್ತವ್ಯ ನಿರ್ವಹಿಸಲಿದ್ದು, ಅಗತ್ಯ ಬಂದೋ ಬಸ್ತ್ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಭಾಗಮಂಡಲದಿಂದ-ತಲಕಾವೇರಿ, ತಲಕಾವೇರಿಯಿಂದ ಭಾಗಮಂಡಲಕ್ಕೆ 20 ಬಸ್‌ಗಳು ಸಂಚರಿಸಲಿವೆ. ಹಾಗೆಯೇ ಜನದಟ್ಟಣೆ ನೋಡಿಕೊಂಡು ಮಡಿಕೇರಿ-ಭಾಗಮಂಡಲ, ಭಾಗಮಂಡಲದಿಂದ-ಮಡಿಕೇರಿ ಮಾರ್ಗ ಬಸ್‌ಗಳು ಸಂಚರಿಸಲಿವೆ ಎಂದು ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕರಾದ ಮೆಹಬೂಬ ಆಲಿ ಅವರು ಮಾಹಿತಿ ನೀಡಿದರು.
ಮಡಿಕೇರಿ-ಭಾಗಮಂಡಲ, ತಲಕಾವೇರಿಗೆ ತೆರಳುವ ರಸ್ತೆಗಳ ಗುಂಡಿಮುಚ್ಚುವ ಕಾರ್ಯ ಪೂರ್ಣಗೊಳ್ಳುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಸಿದ್ದೇಗೌಡ ಅವರು ತಿಳಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಜಿ.ಪಂ.ಸಿಇಒ ವರ್ಣಿತ್ ನೇಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ತಹಶೀಲ್ದಾರ್ ಪ್ರವೀಣ್ ಕುಮಾರ್, ಭಾಗಮಂಡಲ-ಭಗಂಡೇಶ್ವರ ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್, ಪೊನ್ನಣ್ಣ, ಭಾಗಮಂಡಲ ತಲಕಾವೇರಿ ದೇವಾಲಯಗಳ ಪ್ರಮುಖರಾದ ಬಿ.ಎಸ್.ತಮ್ಮಯ್ಯ, ದೇವಾಲಯದ ತಕ್ಕ ಮುಖ್ಯಸ್ಥರಾದ ಬಳ್ಳಡ್ಕ ಅಪ್ಪಾಜಿ, ಕೋಡಿ ಮೋಟಯ್ಯ ಇತರರು ಇದ್ದರು.
Breaking News
- *ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜ್ ನಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ*
- *ಕೊಡಗು ಹಿತರಕ್ಷಣಾ ವೇದಿಕೆಯಿಂದ ಸಂಭ್ರಮದ 76ನೇ ಗಣರಾಜ್ಯೋತ್ಸವ ಆಚರಣೆ*
- *ರಾಜಾಸೀಟು ಸೊಬಗಿಗೆ ಮನಸೋತ ಉಸ್ತುವಾರಿ ಸಚಿವರು*
- *ಸಿಕ್ಕ ಸಿಕ್ಕ ವಾಹನಗಳ ಮೇಲೆ ಒಂಟಿ ಸಲಗ ದಾಳಿ*
- *ಕೊಡ್ಲಿಪೇಟೆ ನಂದಿಪುರ ಕೆರೆ ಅಭಿವೃದ್ಧಿ : ಗ್ಯಾರಂಟಿ ಯೋಜನೆಗಳ ಮೂಲಕ ಭ್ರಷ್ಟಚಾರವಿಲ್ಲದೆ ಜನರಿಗೆ ನೇರವಾಗಿ ಹಣ : ಸಚಿವ ಎನ್.ಎಸ್.ಭೋಸರಾಜು*
- *ಸಿಎನ್ಸಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶಾಂತಿಯುತ ಹಕ್ಕೊತ್ತಾಯ ಮಂಡನೆ*
- *ಕೊಡಗು ವಿಶ್ವವಿದ್ಯಾಲಯದಲ್ಲಿ ಕೌಶಲ್ಯಾಭಿವೃದ್ಧಿ ಡಿಪ್ಲೊಮೋ ಕೋರ್ಸ್ ಲೋಕಾರ್ಪಣೆ : ವಿದ್ಯಾರ್ಥಿಗಳು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಬೇಕು : ಸಚಿವ ಎನ್ ಎಸ್ ಭೋಸರಾಜು ಕರೆ*
- *ಜಿಲ್ಲಾ ಮಟ್ಟದ ಜನಸ್ಪಂದನಾ ಸಭೆ : ಸಮಸ್ಯೆಗಳ ಪರಿಹಾರಕ್ಕೆ ಸಚಿವ ಎನ್.ಎಸ್.ಭೋಸರಾಜು ಸೂಚನೆ*
- *ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಹಳೆ ವಿದ್ಯಾರ್ಥಿ ಸಂಘದಿಂದ ಗುರುವಂದನಾ ಕಾರ್ಯಕ್ರಮ*
- *ಮಡಿಕೇರಿಯಲ್ಲಿ 76 ನೇ ಗಣರಾಜ್ಯೋತ್ಸವದ ಅರ್ಥಪೂರ್ಣ ಆಚರಣೆ*