ಮಡಿಕೇರಿ ಅ.16 : ಜನಪ್ರಿಯ ಚಲನಚಿತ್ರ “ಕಾಂತಾರ”ದ ದೈವದ ಕಲಾಕೃತಿ ಮಡಿಕೇರಿ ದಸರಾ ಜನೋತ್ಸವದಲ್ಲಿ ಕಲಾಭಿಮಾನಿಗಳನ್ನು ಆಕರ್ಷಿಸುತ್ತಿದೆ.
ಮೈಸೂರಿನ ಮರಳು ಶಿಲ್ಪಿ ಎಂ.ಎನ್.ಗೌರಿ ಅವರು ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯ ಮುಂಭಾಗದಲ್ಲಿ ಕಳೆದ ಮೂರು ದಿನಗಳ ಸತತ ಪರಿಶ್ರಮದ ಮೂಲಕ ದೈವದ ಮರಳಿನ ಕಲಾಕೃತಿಯನ್ನು ಸುಂದರವಾಗಿ ರೂಪಿಸಿದ್ದಾರೆ.
‘ಕಾಂತಾರ” ಚಲನಚಿತ್ರದಲ್ಲಿ ಬರುವ ದೈವ ಪ್ರಕೃತಿಯ ರಕ್ಷಣೆಯ ದ್ಯೋತಕವಾಗಿ ಕಂಡು ಬರುತ್ತದೆ. ಈ ಹಿನ್ನೆಲೆ ಕೊಡಗಿನ ಸುಂದರ ಪರಿಸರ ರಕ್ಷಣೆಯಾಗಲಿ ಎನ್ನುವ ಸಂದೇಶವನ್ನು ನೀಡುವ ಮೂಲ ಚಿಂತನೆಯಡಿ ಕಾಂತಾರದ ದೈವವನ್ನು ಮರಳು ಶಿಲ್ಪವಾಗಿಸಿದ್ದೇನೆ’ ಎಂದು ಗೌರಿ ಹೇಳಿದರು.
ದೇಶ ವಿದೇಶಗಳಲ್ಲಿ ಮರಳು ಶಿಲ್ಪವನ್ನು ರಚಿಸುವ ಮೂಲಕ ಪ್ರಖ್ಯಾತರಾಗಿರುವ ಮೈಸೂರಿನ ನಂಜುಂಡಸ್ವಾಮಿ ಮತ್ತು ನಾಗಲಾಂಬಿಕೆ ಅವರ ಪುತ್ರಿ, ಫೈನ್ ಆಟ್ರ್ಸ್ ಪದವೀಧರೆ ಗೌರಿ ಅವರು, ಮಡಿಕೇರಿ ದಸರಾಕ್ಕೆ ರಚಿಸಿರುವ ಕಾಂತಾರ ದೈವದ ಕಲಾಕೃತಿ, ಒಟ್ಟಾರೆ ಇವರ 66 ನೇ ಕಲಾಕೃತಿಯಾಗಿದೆ. ಸುಮಾರು ಹನ್ನೆರಡು ವರ್ಷಗಳ ಹಿಂದೆ ಮಡಿಕೇರಿ ದಸರಾದಲ್ಲಿ ‘ಮಹಿಷಾಸುರ ಮರ್ಧಿನಿ’ ಕಲಾಕೃತಿಯನ್ನು, ಏಳು ವರ್ಷಗಳ ಹಿಂದಿನ ದಸರಾ ಸಂದರ್ಭ ‘ಚಾಮುಂಡೇಶ್ವರಿ’ಯ ಕಲಾಕೃತಿಯನ್ನು ಮರಳಿನಲ್ಲಿ ರಚಿಸಿ ಗಮನ ಸೆಳೆದಿದ್ದ ಗೌರಿ ಅವರ ಕಾಂತಾರ ದೈವ ಈ ಬಾರಿಯ ಆಕರ್ಷಣೆಯಾಗಿದೆ. ಹೆಚ್ಚಿನ ಸಂಖ್ಯೆಯ ಕಲಾಸಕ್ತರು ಕಲಾಕೃತಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.