ಮಡಿಕೇರಿ ಅ.17 : ದಸರಾ ಉತ್ಸವದಲ್ಲಿ ಸರ್ವರೂ ಪಾಲ್ಗೊಳ್ಳುವ ಮೂಲಕ ಉತ್ಸವ ಯಶಸ್ವಿಯಾಗಿ ನಡೆಯುವಂತಾಗಲಿ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಆಶಿಸಿದರು.
ಮಡಿಕೇರಿ ದಸರಾ ಜನೋತ್ಸವ ಪ್ರಯುಕ್ತ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯ ಹಾಗೂ ಜಿಲ್ಲೆಯಲ್ಲಿ ಬರಪರಿಸ್ಥಿತಿ ಇದ್ದರೂ ಕೂಡ ಐತಿಹಾಸಿಕ ಹಿನ್ನೆಲೆಯಿರುವ ದಸರಾ ಉತ್ಸವ ಕಳೆಗುಂದ ಬಾರದು ಎಂಬ ಕಾರಣಕ್ಕಾಗಿ ಸರ್ಕಾರವು ಸಾಧ್ಯವಾದಷ್ಟು ಅನುದಾನವನ್ನು ಬಿಡುಗಡೆ ಮಾಡಿದೆ. ಒಂದು ವೇಳೆ ಬರಪರಿಸ್ಥಿತಿ ಇಲ್ಲದಿದ್ದಲ್ಲಿ ಮತ್ತಷ್ಟು ವೈಭವಯುತವಾಗಿ ಉತ್ಸವ ಆಚರಣೆ ಮಾಡಬಹುದಾಗಿತ್ತು ಎಂದು ಅವರು ಹೇಳಿದರು.
ಶಾಸಕ ಡಾ.ಮಂಥರ್ ಗೌಡ ಮಾತನಾಡಿ, ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಸಾಂಸ್ಕೃತಿಕ ಸಿಗುವಂತಾಗಬೇಕು. ಸರಕಾರ ದಸರಾ ಉತ್ಸವಕ್ಕೆ ಬಿಡುಗಡೆ ಮಾಡಿರುವ ಅನುದಾನದಲ್ಲಿ ಮಂಟಪ ಸಮಿತಿಗಳಿಗೆ ಹೆಚ್ಚಿನ ಆದ್ಯತೆ ನೀಡುವತ್ತ ದಸರಾ ಸಮಿತಿ ಗಮನಹರಿಸಬೇಕೆಂದು ಹೇಳಿದರು.
ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಮಾತನಾಡಿ, ಸಚಿವರು ಹಾಗೂ ಶಾಸಕರ ಪ್ರಯತ್ನದಿಂದ ದಸರಾ ಉತ್ಸವಕ್ಕೆ ಮೊದಲು ಬಿಡುಗಡೆಯಾಗಿದ್ದ ಅನುದಾನದ ಜೊತೆಗೆ ಹೆಚ್ಚುವರಿ 20 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ವೆಂಕಟ್‍ರಾಜಾ ಮಾತನಾಡಿ, ಕೊಡಗು ಜಿಲ್ಲಾಡಳಿತವು ಸದಾ ಜನಪರವಾಗಿಯೇ ಕೆಲಸ ಮಾಡುತ್ತಿದೆ. ಮಡಿಕೇರಿ ಹಾಗೂ ಗೋಣಿಕೊಪ್ಪಲುವಿನಲ್ಲಿ ದಸರಾ ಉತ್ಸವ ಉತ್ತಮವಾಗಿ ನಡೆಯುತ್ತಿರುವುದು ಹರ್ಷ ಮೂಡಿಸಿದೆ. ದಸರಾದಲ್ಲಿನ ಎಲ್ಲಾ ಕಾರ್ಯಕ್ರಮಗಳು ಪಾರದರ್ಶಕವಾಗಿ ನಡೆಯುವಂತಾಗಲಿ ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ನಗರದ ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ ಮಾತನಾಡಿ, ಒಂಭತ್ತು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿಯಿತ್ತರು.
ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಅನಿಲ್ ಹೆಚ್.ಟಿ. ಪ್ರಾಸ್ತಾವಿಕವಾಗಿ ಮಾತನಾಡಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಮಾಹಿತಿ ನೀಡಿದರು.
ವೇದಿಕೆಯಲ್ಲಿ ದಸರಾ ಸಮಿತಿ ಉಪಾಧ್ಯಕ್ಷೆ ಸವಿತಾ ರಾಕೇಶ್, ವಾರ್ತಾಧಿಕಾರಿ ಚಿನ್ನಸ್ವಾಮಿ, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಾಗೂ ದಸರಾ ಸಮಿತಿಯ ಪದಾಧಿಕಾರಿಗಳು, ನಗರಸಭಾ ಸದಸ್ಯರುಗಳು ಹಾಜರಿದ್ದರು.
ಭಾರತಿ ರಮೇಶ್ ಮತ್ತು ನಂದಿನಿ ಗಣೇಶ್ ಪ್ರಾರ್ಥಿಸಿದರು. ದಸರಾ ಸಮಿತಿ ಮಾಜಿ ಕಾರ್ಯಾಧ್ಯಕ್ಷ ಮಹೇಶ್ ಜೈನಿ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ ಸ್ವಾಗತಿಸಿದರು. ಖಜಾಂಚಿ ಅರುಣ್ ಶೆಟ್ಟಿ ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಮರಳು ಕಲಾವಿದೆ ಗೌರಿ ರಚಿಸಿರುವ ವನದೇವಿಯ ಮರಳು ಕಲಾಕೃತಿ ಹಾಗೂ ದಸರಾ ಫೋಟೋ ಪಾಯಿಂಟ್‍ನ್ನು ಸಚಿವ ಬೋಸರಾಜು ಉದ್ಘಾಟಿಸಿದರು.









