ಪುತ್ತೂರು ಅ.17 : ಕಾಲ ಇರುವುದು ಕಳೆಯುವುದಕ್ಕಲ್ಲ, ಅರ್ಥಪೂರ್ಣವಾಗಿ ವಿನಿಯೋಗಿಸುವುದಕ್ಕೆ, ಕಳೆದುಹೋದ ಹಣವನ್ನಾದರೂ ಮರಳಿ ಸಂಪಾದಿಸಬಹುದು, ಆದರೆ ಕಳೆದು ಹೋದ ಸಮಯವನ್ನು ಏನು ಮಾಡಿದರೂ ಹಿಂಪಡೆಯಲಾಗದು ಎಂದು ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಆಡಳಿತ ಮಂಡಳಿಯ ನಿರ್ದೇಶಕ ರವಿಕೃಷ್ಣ.ಡಿ. ಕಲ್ಲಾಜೆ ಹೇಳಿದರು.
ಅವರು ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯಲ್ಲಿ ನಡೆದ IEEE ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಸಮಯವನ್ನು ಚಾತುರ್ಯದಿಂದ ನಿರ್ವಹಿಸುವವನು ಎತ್ತರಕ್ಕೆ ಏರುತ್ತಾನೆ, ಸಮಯವನ್ನು ಅಲಕ್ಷ್ಯದಿಂದ ವ್ಯಯಿಸುವವನು ಪರಿತಪಿಸುತ್ತಾನೆ ಎಂದರು. ಅವಕಾಶಗಳು ಸಾಕಷ್ಟು ಇವೆ, ಆದರೆ ಅದನ್ನು ಸರಿಯಾದ ರೀತಿಯಲ್ಲಿ ಪಡೆದುಕೊಳ್ಳುವ ಚಾಕಚಕ್ಯತೆಯನ್ನು ಬೆಳೆಸಿಕೊಳ್ಳಬೇಕು. ಪ್ರಸ್ತುತ ಸನ್ನಿವೇಶದಲ್ಲಿ ಸ್ವಯಂ ಉದ್ಯೋಗಕ್ಕೆ ಸಾಕಷ್ಟು ಅವಕಾಶವಿದೆ. ಆದರೆ ಅದಕ್ಕೆ ಬೇಕಾದ ಪೂರ್ವ ತರಬೇತಿಯನ್ನು ಪಡೆಯದೆ ಪ್ರಾರಂಭಿಸಿದರೆ ಯೋಜಿತ ಉನ್ನತಿ ದೊರೆಯದೆ ಹೋಗಬಹುದು ಎಂದರು.
ಕಾಲೇಜಿನ IEEE ವಿದ್ಯಾರ್ಥಿ ವಿಭಾಗದ ಪೂರ್ವ ಮುಖ್ಯಸ್ಥ ಡಾ.ಮಹಾಂತೇಶ್ ಚೌಧರಿ ಮಾತನಾಡಿ ಇದೊಂದು ವಿಶ್ವದ ಅತಿದೊಡ್ಡ ತಾಂತ್ರಿಕ ವೃತ್ತಿಪರ ಸಂಸ್ಥೆಯಾಗಿದ್ದು, ಮಾನವೀಯತೆಯ ಪ್ರಯೋಜನಕ್ಕಾಗಿ ವಿವಿಧ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ನಿರತವಾಗಿದೆ. ಇದರ ಸದಸ್ಯತನವನ್ನು ಪಡೆಯುವುದು ಪ್ರತಿಯೊಬ್ಬ ತಂತ್ರಜ್ಞನಿಗೂ ಒಂದು ಹೆಮ್ಮೆ ಎಂದು ತಿಳಿಸಿದರು.
IEEE ವಿದ್ಯಾರ್ಥಿ ವಿಭಾಗದ ಪ್ರಾಧ್ಯಾಪಕ ಸಲಹೆಗಾರ್ತಿ ಪ್ರೊ.ರಜನಿ ರೈ ಹಾಗೂ ವಿದ್ಯಾರ್ಥಿ ಪ್ರತಿನಿಧಿ ರಚನಾ.ಎಂ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
IEEE ದಿನಾಚರಣೆಯ ಪ್ರಯುಕ್ತ ಕಾರ್ಯಾಗಾರಗಳು, ವೆಬಿನಾರ್‌ಗಳು, ತಾಂತ್ರಿಕ ಹಾಗೂ ಇತರ ವಿಭಾಗಗಳಲ್ಲಿ ಸುಮಾರು 25 ವಿವಿಧ ಸ್ಪರ್ಧೆಗಳನ್ನು ನಡೆಸಲಾಗಿತ್ತು. ವಿಜೇತರಿಗೆ ಇದೇ ಸಂದರ್ಭ ಬಹುಮಾನ ವಿತರಿಸಲಾಯಿತು.
ಕಾಲೇಜಿನ IEEE ವಿದ್ಯಾರ್ಥಿ ವಿಭಾಗದ ಮುಖ್ಯಸ್ಥೆ ಡಾ.ಜೀವಿತಾ.ಬಿ.ಕೆ ವಾರ್ಷಿಕ ವರದಿಯನ್ನು ಮಂಡಿಸಿದರು.
ವಿದ್ಯಾರ್ಥಿಗಳಾದ ಚೈತ್ರಾ.ಬಿ ಸ್ವಾಗತಿಸಿ, ಸರೋಶ್ ನಾಯಕ್ ವಂದಿಸಿದರು. ಸ್ನೇಹಾ.ಬಿ ಹಾಗೂ ನಿವೀತ ಕಾರ್ಯಕ್ರಮ ನಿರ್ವಹಿಸಿದರು.












