ಮಡಿಕೇರಿ ಅ.18 : ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ 2023-24ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮವನ್ನ ಎನ್‌ಎಸ್‌ಎಸ್ ನೋಡಲ್ ಅಧಿಕಾರಿ ವನಿತ್ ಕುಮಾರ್ ಉದ್ಘಾಟಿಸಿ, ಮಾತನಾಡಿ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಕೊಡಗಿಗೆ ಒಂದು ಹೆಮ್ಮೆ. ಎಲ್ಲಾ ಕಾಲೇಜುಗಳಿಗೂ ಇದು ದೊಡ್ಡಣ್ಣನಂತಿದೆ ಎಂದು ಬಣ್ಣಿಸಿದರು.
ಸಣ್ಣದಾಗಿ ಆರಂಭವಾದ ರಾಷ್ಟ್ರೀಯ ಸೇವಾಯೋಜನೆ ಇದೀಗ ಹೆಮ್ಮರವಾಗಿ ಬೆಳೆದಿದ್ದು, ಉತ್ತಮ ಮನೋಭಾವನೆಯ ಮೂಲಕ ದೇಶದ ಒಳಗೆ ರಕ್ಷಣೆ ಮಾಡುವ ಕೆಲಸಕ್ಕೆ ಮುಂದಾಗಿದೆ. ಇದು ಸೇವಾ ಮನೋಭಾವ, ನಾಯಕತ್ವ ಗುಣ, ದೇಶ ಪ್ರೇಮ, ತಾಳ್ಮೆಯನ್ನ ಮೈಗೂಡಿಸಿ ಕೊಡುತ್ತದೆ ಎಂದರು.
ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದ ಸಂದರ್ಭ ಅನೇಕ ಸ್ವಯಂ ಸೇವಕರು ತಮ್ಮ ಜೀವದ ಹಂಗು ತೊರೆದು ರಕ್ಷಣೆಯಲ್ಲಿ ಮುಂದಾಗಿದ್ದರು. ಅದರಂತೆ ವಿದ್ಯಾರ್ಥಿಗಳು ಕೂಡ ತುರ್ತು ಸಂದರ್ಭದಲ್ಲಿ ಸ್ವಯಂ ಸೇವೆಯಲ್ಲಿ ತೊಡಗಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಬಿ.ರಾಘವ ಮಾತನಾಡಿ, ಕಾಲೇಜಿನ ಪ್ರಮುಖ ಆಧಾರ ಸ್ತಂಭ ಎನ್‍ಎಸ್‍ಎಸ್ ಹಾಗೂ ಎನ್‍ಸಿಸಿ, ಎನ್‍ಎಸ್‍ಎಸ್ ಹಾಗೂ ಎನ್‍ಸಿಸಿ ಈ ಎರಡು ಗುಂಪುಗಳು ನಿಸ್ವಾರ್ಥ ಸೇವೆ ಸಲ್ಲಿಸುತ್ತದೆ. ಇದರಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನು ಬೆಳೆಸಲು ಸಹಾಯವಾಗುತ್ತದೆ ಎಂದ ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಿ, ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜೇಂದ್ರ, ಎನ್‌ಎಸ್‌ಎಸ್ ಯೋಜನಾಧಿಕಾರಿ ಗಾಯತ್ರಿ, ಸಹ ಯೋಜನಾಧಿಕಾರಿಗಳಾದ ಖುಷಿದ, ಮುಸ್ತಫ, ಬೈರವಿ, ಎನ್‌ಎಸ್‌ಎಸ್ ಸ್ವಯಂ ಸೇವಕರು ಸೇರಿದಂತೆ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.