ನಾಪೋಕ್ಲು ಅ.19 : ಇತಿಹಾಸ ಪ್ರಸಿದ್ಧ ಬಲಮುರಿಯ ಶ್ರೀ ಅಗಸ್ತೇಶ್ವರ ದೇವಾಲಯದಲ್ಲಿ ಕಾವೇರಿ ನದಿಗೆ ಮಹಾ ಮಂಗಳಾರತಿಯೊಂದಿಗೆ ತೀರ್ಥ ಸ್ಥಾನ ಜಾತ್ರಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ಭಕ್ತಾದಿಗಳು (ತುಲಾ) ಕಾವೇರಿ ಸಂಕ್ರಮಣದ ಪುಣ್ಯ ತೀರ್ಥ ಸ್ಥಾನ ಮಾಡಿ ಎರಡನೆಯ ಪುಣ್ಯಾತೀರ್ಥ ಸ್ಥಾನವನ್ನು ಮಾಡುವುದು ತಲತಲಾಂತರ ಗಳಿಂದ ನಡೆದು ಬಂದ ಪದ್ಧತಿ ಪರಂಪರೆಯಾಗಿದ್ದು, ಭಕ್ತರು ಜಾತ್ರೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ವಿಶೇಷ ಪೂಜಾ ವಿಧಿ ವಿಧಾನಗಳನ್ನು ಸಲ್ಲಿಸಿ ತಮ್ಮಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿದರು.
ಕ್ಷೇತ್ರದಲ್ಲಿ ಬೆಳಿಗ್ಗೆಯಿಂದಲೇ ಕೇಶ ಮುಂಡನ, ಪಿಂಡಪ್ರಧಾನ, ಕಾವೇರಿ ತೀರ್ಥಸ್ನಾನ, ಕಾವೇರಿಯ ಬಾಲೋಪಾಟ್ ಮತ್ತಿತರ ಕಾರ್ಯಗಳು ಜರುಗಿದವು.
ಕಾವೇರಿ ನದಿಗೆ ಮಹಾ ಮಂಗಳಾರತಿಯನ್ನು ಅರ್ಚಕ ಮಹಾಬಲೇಶ್ವರ ಭಟ್
ಸಹವರ್ತಿಗಳು ನೆರವೇರಿಸಿಕೊಟ್ಟರು.
ಬಳಿಕ ನದಿಯಿಂದ ಪವಿತ್ರ ನೀರನ್ನು ಅರ್ಚಕರು ಬಿಂದಿಗೆಯಲ್ಲಿ ತುಂಬಿ ಶ್ರದ್ಧಾ ಭಕ್ತಿಯಿಂದ ದೇವಾಲಯಕ್ಕೆ ಕೊಂಡೊಯ್ದು ದೇವರ ಪ್ರತಿಬಿಂಬಕ್ಕೆ ಅಭಿಷೇಕ ಮಾಡಲಾಯಿತು. ಆನಂತರ ವಿಶೇಷ ಮಹಾಪೂಜೆ ಮಂಗಳಾರತಿ ತೀರ್ಥ ಪ್ರಸಾದ ವಿತರಣೆ ನಡೆಯಿತು. ಉತ್ಸವಕ್ಕೆ ಆಗಮಿಸಿದ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿತು.
ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಕಾರ್ಯದರ್ಶಿ ಪೊನ್ನಚನ ಜಯ, ಅನ್ನದಾನ ಸಮಿತಿಯ ಕಾರ್ಯದರ್ಶಿ ಪಾಲಾಂದಿರ ಚಂಗಪ್ಪ, ನಿರ್ದೇಶಕರುಗಳಾದ ತೊತ್ತಿಯಂಡ ಪುಟ್ಟಯ್ಯ, ಕುಂದನ ಪ್ರಭಾನಂದ, ಕಟ್ರತನ ಉತ್ತಪ್ಪ, ಕಟ್ರತನ ಲೋಕನಾಥ್, ಪೊನ್ನಚನ ಹೊನ್ನಪ್ಪ, ಕಾಂಗೀರ ಮಾದಪ್ಪ, ಪಾಲಂದಿರ ನಾಚಪ್ಪ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಬಿದ್ದಂಡ ಉಷಾದೇವಮ್ಮ, ಬೊಳ್ಳಚೆಟ್ಟೀರ ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ದೇವಾಲಯದ ತಕ್ಕರು , ಆಡಳಿತ ಮಂಡಳಿ ಅಧ್ಯಕ್ಷರೂ ಆಗಿರುವ ಕೊಂಗೀರಂಡ ಸಾಧು ತಮ್ಮಯ್ಯ ಮಾತನಾಡಿ, ವರ್ಷಂಪ್ರತಿ ತಲಕಾವೇರಿಯಲ್ಲಿ ತೀರ್ಥೋದ್ಭವದ ಮರುದಿನ ಬಲಮುರಿಯಲ್ಲಿ ಜಾತ್ರೆ ನಡೆಯುತ್ತಿದೆ. ಕೇಶ ಮುಂಡನ, ತೀರ್ಥ ಸ್ನಾನ, ಪಿಂಡಪ್ರದಾನ ಸೇರಿದಂತೆ ಎಲ್ಲಾ ಕಾರ್ಯಗಳು ನಡೆದಿದೆ. ಎರಡು ವರ್ಷಗಳಿಂದ ಕಾವೇರಿ ಮಾತೆಗೆ ಮಹಾ ಮಂಗಳಾರತಿಯನ್ನು ನೆರವೇರಿಸಲಾಗುತ್ತಿದೆ ಎಂದರು.
ಅನ್ನದಾನ ಸಮಿತಿಯ ಅಧ್ಯಕ್ಷ ಬೊಳ್ಳಚೆಟ್ಟಿರ ಚೆಟ್ಟಿಚ್ಚ ಮಾತನಾಡಿ, ಗ್ರಾಮಸ್ಥರು 2022 ರಿಂದ ಒಟ್ಟುಗೂಡಿ ಅನ್ನದಾನ ಸಮಿತಿ ರಚಿಸಿದ್ದೇವೆ. ಗ್ರಾಮಸ್ಥರ ದೇಣಿಗೆಯನ್ನು ಬಳಸಿ ಜಾತ್ರೆಯಂದು ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗುತ್ತಿದೆ. ತಲಕಾವರಿಯಂತೆ ಇಲ್ಲಿಯೂ ತೀರ್ಥ ಸ್ಥಾನಕ್ಕೆ ವಿಶೇಷ ಮಹತ್ವ ಇದೆ ಎಂದು ತಿಳಿಸಿದರು.
ವರದಿ : ದುಗ್ಗಳ ಸದಾನಂದ