ಮಡಿಕೇರಿ ಅ.19 : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೊಡಗು ಜಿಲ್ಲಾ ಘಟಕದ ವತಿಯಿಂದ ಅ.29 ರಂದು ಪತ್ರಿಭಾ ಪುರಸ್ಕಾರ, ಹಾನಗಲ್ ಶ್ರೀ ಕುಮಾರಸ್ವಾಮಿಗಳ 156ನೇ ಜಯಂತಿ, ಡಾ.ಶ್ರೀ ಶಿವಕುಮಾರಸ್ವಾಮಿ ಜಯಂತಿ ಹಾಗೂ ಜನಜಾಗೃತಿ ಸಭೆ ನಡೆಯಲಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ವಿ.ಶಿವಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಅಧ್ಯಕ್ಷತೆಯಲ್ಲಿ ಅಂದು ಬೆಳಗ್ಗೆ 10 ಗಂಟೆಗೆ ಕುಶಾಲನಗರದ ರೈತ ಸಹಕಾರ ಭವನದಲ್ಲಿ ನಡೆಯಲಿರುವ ಮೊದಲನೇ ಅಧಿವೇಶನವನ್ನು ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಅರಣ್ಯ, ಜೈವಿಕ, ಪರಿಸರ ಸಚಿವ ಈಶ್ವರಖಂಡ್ರೆ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕೊಡ್ಲಿಪೇಟೆ ಕಲ್ಮಠ ಶ್ರೀ ಮಹಾಂತ ಸ್ವಾಮೀಜಿ, ಅಮ್ಮತ್ತಿ ಕನ್ನಡ ಮಠದ ಶ್ರೀ ಚನ್ನಬಸವದೇಶಿಕೇಂದ್ರ ಸ್ವಾಮೀಜಿ, ಶನಿವಾರಸಂತೆ ಮುದ್ದಿನಕಟ್ಟೆ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ತೊರೆನೂರು ವಿರಕ್ತ ಮಠ ಶ್ರೀ ಮಲ್ಲೇಶ್ ಸ್ವಾಮೀಜಿ, ಶನಿವಾರಸಂತೆ ಮನೆಹಳ್ಳಿ ತಪೋವನ ಕ್ಷೇತ್ರದ ಮಹಾಂತ ಶಿವಲಿಂಗ ಸ್ವಾಮೀಜಿ, ಶಿಡಿಗಳಲೆ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಸೋಮವಾರಪೇಟೆ ವಿರಕ್ತ ಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ದಿವ್ಯ ನೇತೃತ್ವ ವಹಿಸಲಿದ್ದು, ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಸಿ ಆಶಯ ನುಡಿಗಳನ್ನಾಡಲಿದ್ದಾರೆ.
ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಅಶೋಕ ಸಂ.ಆಲೂರು ಪುಸ್ತಕ ಬಿಡುಗಡೆ ಮಾಡಲಿದ್ದು, ಬರಹಗಾರ ಡಾ.ಪ್ರಭಾಕರ್ ಶಿಶಿರ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ಉಚ್ಛ ನ್ಯಾಯಾಲಯದ ಹಿರಿಯ ವಕೀಲ ಹೆಚ್.ಎಸ್.ಚಂದ್ರಮೌಳಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಡಾ.ಶಂಕರ್ ಮಹದೇವ ಬಿದರಿ, ಮಹಾಸಭಾದ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಮಧ್ಯಾಹ್ನ 2 ಗಂಟೆಗೆ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಎರಡನೇ ಅಧಿವೇಶನ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಕೋಶಾಧ್ಯಕ್ಷ ವರುಣ ಮಹೇಶ್, ಕಟ್ಟಡ ಸ್ಥಳದಾನಿ ಎಂ.ಬಿ.ಬಸವರಾಜು, ಜಿಲ್ಲಾ ಕೈಗಾರಿಕ ಮತ್ತು ವಾಣಿಜ್ಯ ಘಟಕದ ಅಧ್ಯಕ್ಷ ಯು.ಎಂ.ಬಸವರಾಜ್, ಯುವ ಘಟಕದ ಅಧ್ಯಕ್ಷ ಮೋಕ್ಷಿತ್, ಮಹಿಳಾ ಘಟಕದ ಅಧ್ಯಕ್ಷೆ ಮಮತ ಸತೀಶ್ ಸೇರಿದಂತೆ ಇತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಗುವುದು, ಕ್ರೀಡಾಕೂಟದ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಅಲ್ಲದೇ ಎಸ್‍ಎಸ್‍ಎಲ್ ಹಾಗೂ ಪಿಯುಸಿಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದ ವೀರಶೈವ ಲಿಂಗಾಯತ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಶಿವಪ್ಪ ಹೇಳಿದರು.
ಪ್ರತಿಭಾ ಪುರಸ್ಕಾರಕ್ಕೆ ಈಗಾಗಲೇ 120 ಅರ್ಜಿ ಸಲ್ಲಿಕೆಯಾಗಿದ್ದು, ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೂ ಮೊದಲು ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಟಿ.ಎಸ್.ಶಾಂಭಶಿವಮೂರ್ತಿ, ಖಜಾಂಚಿ ಹೆಚ್.ಪಿ.ಉದಯಕುಮಾರ ಹಾಗೂ ಸದಸ್ಯ ಮಹದೇವಪ್ಪ ಉಪಸ್ಥಿತರಿದ್ದರು.











