ಸುಂಟಿಕೊಪ್ಪ ಅ.21 : 7ನೇ ಹೊಸಕೋಟೆ ತೊಂಡೂರು ಗ್ರಾಮದಲ್ಲಿರುವ ವಿಕಾಸ್ ಜನಸೇವಾ ಟ್ರಸ್ಟ್‍ನ ಜೀವನದಾರಿ ಆಶ್ರಮಕ್ಕೆ ಶಾಸಕ ಮಂತರ್‍ಗೌಡ ಭೇಟಿ ನೀಡಿ ವೃದ್ಧರ ಯೋಗಕ್ಷೇಮ ವಿಚಾರಿಸಿದರು.
ದಿವಂಗತ ರಮೇಶ್ ಹಾಗೂ ರೂಪ ರಮೇಶ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸಂತಾಪ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಶಾಸಕರು, ನಿಮ್ಮನ್ನೆಲ್ಲಾ ರಮೇಶ್ ಅವರು ಪೋಷಿಸಿದಂತೆ ಅವರ ಅಣ್ಣ ಮಂಜುನಾಥ್ ಅವರು ನೋಡಿಕೊಳ್ಳಲು ಮುಂದಾಗಿದ್ದಾರೆ. ಅವರ ಸೇವೆಗೆ ವೈಯಕ್ತಿಕವಾಗಿ ಮತ್ತು ಸರ್ಕಾರದ ಭಾಗದಿಂದಲೂ ಸಂಪೂರ್ಣ ಸಹಕಾರವನ್ನು ನೀಡಲಾಗುವುದೆಂದು ಭರವಸೆ ವ್ಯಕ್ತಪಡಿಸಿದರು.
ವಿಶೇಷಚೇತನರ ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಅಧಿಕಾರಿಯವರೊಡನೆ ಮಾತನಾಡಿ, ಅನುದಾನ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಒದಗಿಸಿಕೊಡಲು ಪ್ರಯತ್ನಿಸುವೆ ಎಂದು ತಿಳಿಸುವ ಮೂಲಕ ಆಶ್ರಮದ ನಿವಾಸಿಗಳಿಗೆ ಧೈರ್ಯ ತುಂಬಿದರು. ತಿಂಗಳಿಗೆ 2 ಬಾರಿಯಾದರೂ ಆಶ್ರಮದ ಕಾರ್ಯಚಟುವಟಿಕೆಗಳ ಬಗ್ಗೆ ಗಮನಕ್ಕೆ ತಂದಲ್ಲಿ ಆಶ್ರಮಕ್ಕೆ ಬೇಕಾದ ಅವಶ್ಯಕವಾದ ಅಗತ್ಯತೆಗಳನ್ನು ಪೂರೈಸಲು ಸಹಕಾರಿಯಾಗಲಿದೆ ಮಂಜುನಾಥ್ ರವರಿಗೆ ತಿಳಿಸಿದರು.
ಇದೇ ಸಂದರ್ಭ ದಿ. ರಮೇಶ್ ತಂದೆ ಕರಿಯಪ್ಪ ಅವರಿಗೆ ಸಾಂತ್ವನ ಹೇಳಿ, ರಮೇಶ್ ಮಗಳ ಮುಂದಿನ ವಿದ್ಯಾಭ್ಯಾಸಕ್ಕೂ ಸಹಾಯ ಹಸ್ತ ನೀಡುವ ಬಗ್ಗೆ ಭರವಸೆ ನೀಡಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ, ಗ್ರಾ.ಪಂ.ಉಪಾಧ್ಯಕ್ಷೆ ಸೌಮ್ಯ ಸುನೀಲ್, ಸಿಬಿಆರ್ ಸಂಯೋಜಕ ಮುರುಗೇಶ್, ದಿ.ರಮೇಶ್ ತಂದೆ ಕರಿಯಪ್ಪ, ಪುತ್ರಿ ಐಶ್ವರ್ಯ, ಟ್ರಸ್ಟಿ ನವೀನ್ ಕುಮಾರ್, ಸಹೋದರಿ ರಂಗಮ್ಮ, ಆಶ್ರಮದ ಸಿಬ್ಬಂದಿ ಜಯಂತಿ, ಸ್ವಯಂ ಸೇವಕರಾದ ಶ್ರೀಜಾ, ಪೌಸಿಯ, ರಾಧ ಹಾಗೂ ಗ್ರಾಮಸ್ಥರು ಹಾಜರಿದ್ದರು.









