ಮಡಿಕೇರಿ ಅ.26 : ಹಾರಂಗಿ ಮೀನುಮರಿ ಉತ್ಪಾದನಾ ಕೇಂದ್ರದಲ್ಲಿ ಸರ್ಕಾರಿ ಮತ್ಸ್ಯಾಲಯ ಸ್ಥಾಪಿಸುವಂತೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಕರ್ನಾಟಕ ಸರ್ಕಾರದ ಮೀನುಗಾರಿಕೆ, ಬಂದರು ಹಾಗೂ ಒಳನಾಡುಜಲಸಾರಿಗೆ ಸಚಿವ ಮಂಕಾಳ ಎಸ್. ವೈದ್ಯ ಅವರಿಗೆ ಮನವಿ ಮಾಡಿದರು.
ಹಾರಂಗಿಯ ಮಹಶೀರ್ ಮೀನುಮರಿಗಳ ಉತ್ಪಾದನಾ ಹಾಗೂ ಪಾಲನಾ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭ ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಹಾರಂಗಿ ಮೀನುಮರಿ ಉತ್ಪಾದನಾ ಕೇಂದ್ರದಲ್ಲಿರುವ ಖಾಲಿ ಜಾಗದಲ್ಲಿ ಸರ್ಕಾರಿ ಮತ್ಸ್ಯಾಲಯ ಸ್ಥಾಪಿಸಲು ಕ್ರಮ ಕೈಗೊಂಡು ಕೊಡಗು ಜಿಲ್ಲೆಯ ಪ್ರವಾಸೋದ್ಯಮವನ್ನು ಬಲಪಡಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಹಾರಂಗಿ ಮೀನು ಮರಿ ಉತ್ಪಾದನಾ ಕೇಂದ್ರವು ಪಶ್ಚಿಮ ಘಟ್ಟ ಅಭಿವೃದ್ಧಿ ಯೋಜನೆ ಅಡಿ 1986-87 ರಲ್ಲಿ ಸ್ಥಾಪನೆಯಾಗಿದ್ದು, ಅಳಿವಿನಂಚಿನಲ್ಲಿರುವ ಮಹಶೀರ್ ಮೀನು ಮರಿ ಉತ್ಪಾದನೆ, ಪಾಲನೆ ಹಾಗೂ ನದಿ ಬಿತ್ತನೆ ಮಾಡುವ ಮೂಲಕ ವಿಶಿಷ್ಟ ಪ್ರಭೇದದ ಬಿಳಿಮೀನನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಕೇಂದ್ರದಲ್ಲಿ ಒಟ್ಟು 80 ಸಂಖ್ಯೆ ಮೀನು ಕೊಳಗಳಿದ್ದು, ಸದರಿ ಕೊಳಗಳಲ್ಲಿ ತಾಯಿಮೀನು ಹಾಗೂ ಮೀನುಮರಿಗಳ ಪಾಲನೆ ಮಾಡಲಾಗುತ್ತಿದೆ. ಪ್ರಸ್ತುತ 60 ಕೊಳಗಳು ಸುಸ್ಥಿತಿಯಲ್ಲಿದ್ದು, ಇನ್ನುಳಿದ 6 ಮಣ್ಣಿನ ಕೊಳ ಹಾಗೂ 14 ಸಿಮೆಂಟ್ ಗೋಡೆ ಮಣ್ಣಿನ ತಳಪಾಯದ ಕೊಳಗಳನ್ನು ದುರಸ್ತಿ ಮಾಡಬೇಕಿದೆ. ಆದ್ದರಿಂದ ತಕ್ಷಣವೆ ಕೊಳಗಳನ್ನು ದುರಸ್ತಿ ಮಾಡಿದ್ದಲ್ಲಿ ಹೆಚ್ಚುವರಿ ಮೀನುಗಳ ಪಾಲನೆ ಹಾಗೂ ಬೇಡಿಕೆಗನುಗುಣವಾಗಿ ವಿತರಣೆ ಮಾಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಹಾರಂಗಿ ಜಲಾಶಯಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದು, ಜಲಾಶಯದಲ್ಲಿ ಸಂಗೀತ ಕಾರಂಜಿ, ಸಾಕಾನೆ ಶಿಬಿರ ಹಾಗೂ ಬೃಂದಾವನವಿದೆ. ಇಲ್ಲಿಗೆ ಬರುವ ಪ್ರವಾಸಿಗರಿಗೆ ಸರ್ಕಾರಿ ಮತ್ಸ್ಯಾಲಯ ಸ್ಥಾಪಿಸಿದಲ್ಲಿ ಹೆಚ್ಚಿನ ಆಕರ್ಷಣೆಯಾಗಲಿದೆ ಎಂದು ಹೇಳಿದರು.
ಈ ಸಂದರ್ಭ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು, ಸ್ಥಳೀಯ ಮುಖಂಡರು ಹಾಜರಿದ್ದರು.








