ಮಡಿಕೇರಿ ಅ.26 : ಚಾಲಕನ ನಿಯಂತ್ರಣ ತಪ್ಪಿದ ಮಾರುತಿ ಕಾರೊಂದು ರಸ್ತೆ ಬದಿಯ ತೋಡಿಗೆ ಉರುಳಿ ಬಿದ್ದ ಘಟನೆ ನಾಪೋಕ್ಲು -ಮಡಿಕೇರಿ ಮುಖ್ಯರಸ್ತೆಯ ಪಾಲೂರು ಗ್ರಾಮದಲ್ಲಿ ನಡೆದಿದೆ.
ಕಾರಿನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ಮಡಿಕೇರಿ ಕಡೆಯಿಂದ ನಾಪೋಕ್ಲು ಮಾರ್ಗವಾಗಿ ಎಮ್ಮೆಮಾಡುವಿಗೆ ತೆರಳುತ್ತಿದ್ದ ಮೈಸೂರು ಮೂಲದ ನಾಲ್ಕು ಮಂದಿ ಪ್ರಯಾಣಿಸುತ್ತಿದ್ದ ಮಾರುತಿ ಆಲ್ಟೊ ಕಾರು ಪಾಲೂರು ಗ್ರಾಮದ ವಿಷ್ಣುಮೂರ್ತಿ ದೇವಾಲಯದ ಮುಂಭಾಗದ ರಸ್ತೆಯ ಇಳಿಜಾರಿನಲ್ಲಿ ಗುರುವಾರ ನಸುಕು 3 ಗಂಟೆ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿರುವ ಸುಮಾರು 20 ಅಡಿ ಆಳದ ತೋಡಿಗೆ ಉರುಳಿ ಬಿದ್ದಿದೆ. ಅಪಘಾತದಿಂದ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಪಾಯದಿಂದ ಪಾರಾಗಿದ್ದಾರೆ. ಅಪಘಾತವಾದ ಕಾರನ್ನು ಕೊಟ್ಟಮುಡಿ ಗ್ರಾಮದ ಯುವಕರು ಟ್ರ್ಯಾಕ್ಟರ್ ಬಳಸಿ ಮೇಲೆತ್ತಲು ಸಹಕರಿಸಿದರು.










