ಸುಂಟಿಕೊಪ್ಪ ಅ.26 : ಸುಂಟಿಕೊಪ್ಪ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕುಂಜಿಲನ ಎಸ್.ಮಂಜುನಾಥ್ ಹಾಗೂ ಉಪಾಧ್ಯಕ್ಷರಾಗಿ ಕೆ.ವಿ.ರಮ್ಯಾ ಮೋಹನ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗುರುವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕೆ.ಎಸ್.ಮಂಜುನಾಥ್ ಅವರು ಅಧ್ಯಕ್ಷ ಸ್ಥಾನಕ್ಕೆ ಹಾಗೂ ಕೆ.ವಿ.ರಮ್ಯಾ ಮೋಹನ್ ಅವರು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರು. ಈ 2 ಸ್ಥಾನಗಳಿಗೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ, ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ಬಿ.ಕೆ.ವಿಜೆಯೇಂದ್ರ ಅವರು ಕೆ.ಎಸ್.ಮಂಜುನಾಥ್ ಹಾಗೂ ಕೆ.ವಿ.ರಮ್ಯಾ ಮೋಹನ್ ಅವರುಗಳನ್ನು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಘೋಷಿಸಿದರು.
ಸಭೆಯಲ್ಲಿ ನಿರ್ದೇಶಕರುಗಳಾದ ಎಂ.ಎನ್.ಕೊಮಾರಪ್ಪ, ದಾಸಂಡ ರಮೇಶ್ ಚಂಗಪ್ಪ, ಕೆ.ಪಿ.ಜಗನ್ನಾಥ್, ಡಿ.ಕೆ.ಗಂಗಾಧರ, ಪಟ್ಟೆಮನೆ ಪಿ.ಉದಯಕುಮಾರ್, ಎನ್.ಸಿ.ಪೊನ್ನಪ್ಪ, ಜರ್ಮಿಡಿಸೋಜ, ಕೆ.ಆರ್.ಮಂಜುನಾಥ್, ಕೆ.ಆರ್.ದಯಾನಂದ, ಪಿ.ಪಿ.ಲೀಲಾವತಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಮಿತ್ರ, ಸಿಬ್ಬಂದಿ ವರ್ಗ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಅಧ್ಯಕ್ಷ ಕೆ.ಎಸ್. ಮುಂಜುನಾಥ್ ಅವರು ತಾವು 4ನೇ ಅವಧಿಗೆ ನಿರ್ದೇಶಕನಾಗಿ ಆಯ್ಕೆಯಾಗಿದ್ದು, ಈ ಬಾರಿ ಸರ್ವರ ಸಹಕಾರದಿಂದ ಅಧ್ಯಕ್ಷನಾಗಿದ್ದೇನೆ. ಸಂಘವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಕಟಿಬದ್ಧನಾಗಿದ್ದೇನೆ ಎಂದು ಹೇಳಿದರು.









