ಸುಂಟಿಕೊಪ್ಪ ನ.3 : ಗ್ರಾಮೀಣ ಜನಪದ ಸೊಗಡು ನಮ್ಮ ದಿನನಿತ್ಯದ ಆಗುಹೋಗುಗಳ ಸುಖ ದುಃಖಗಳ ಹಾಡುಪಾಡಾಗಿದ್ದು, ಇದರ ಒಟ್ಟು ಮೊತ್ತವೇ ಜನಪದ ಕಲೆಗಳಾಗಿ ಸಾಹಿತ್ಯ, ಸಂಗೀತ, ಆಚಾರ ವಿಚಾರ, ಆಟೋಗಗಳಲ್ಲಿ ಹೊರಹೊಮ್ಮಿವೆ. ಆದರೆ ಇಂದು ಗ್ರಾಮೀಣ ಸಂಸ್ಕೃತಿ ಅಳಿವಿನಂಚಿನಲ್ಲಿದೆ ಎಂದು ಕುಶಾಲನಗರದ ಅನುಗ್ರಹ ಪ್ರಥಮ ದರ್ಜೆ ಕಾಲೇಜ್ ನ ಕನ್ನಡ ಉಪನ್ಯಾಸಕಿ ಲೀಲಾಕುಮಾರಿ ತೊಡಿಕಾನ ಬೇಸರ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಕೊಡಗರಹಳ್ಳಿಯ ಸುಂಟಿಕೊಪ್ಪ ನಾಡು ಪ್ರೌಢಶಾಲೆಯಲ್ಲಿ ನಡೆದ ಸಂಪಾಜೆ ಸಣ್ಣಯ್ಯ ಪಟೇಲ್ ದತ್ತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಆಧುನೀಕತೆಯ ಭರಾಟೆಯಲ್ಲಿ ಗ್ರಾಮೀಣ ಸಂಸ್ಕೃತಿಯ ಸೊಗಡು ನಶಿಸುತ್ತಿದೆ ಎಂಬ ಅತಂಕ ನಮ್ಮನ್ನು ಕಾಡುತ್ತಿದೆ ಎಂದರು.
ಹಿಂದೆ ಅವಿಭಕ್ತ ಕುಟುಂಬ ಪದ್ಧತಿ ಇದ್ದಾಗ ಹಳ್ಳಿ ಜೀವನದಲ್ಲಿ ಸಹಬಾಳ್ವೆ ಮತ್ತು ಕಾಯಕ ಸಂಸ್ಕೃತಿ ಪ್ರಧಾನವಾಗಿತ್ತು. ಅಂದಿನ ಗ್ರಾಮೀಣ ಕ್ರೀಡೆಗಳಾದ ಕಬ್ಬಡಿ, ಖೋಖೋ, ಚೆನ್ನಮಣೆ, ಯಕ್ಷಗಾನ, ದೈವರಾಧನೆ, ನಾಟಕ, ಜನಪದ ಹಾಡು, ಒಗಟು ಮತ್ತು ಗಾದೆಗಳು ಜನಪದಕ್ಕೆ ಜೀವ ತುಂಬುತ್ತಿದ್ದವು. ಆನೇಕ ಆಧುನಿಕ ರೋಗಗಳಿಗೆ ಜನಪದ ನಾಟಿವೈದ್ಯ ಪದ್ಧತಿ ಯಶಸ್ವಿಯಾಗಿ ನಡೆಯುತ್ತಿದೆ. ಗ್ರಾಮೀಣ ಜನಪದ ಸೊಗಡು ಆಕಾಶದಷ್ಟು ವಿಸ್ತರವಾಗಿ, ಸಾಗರದಷ್ಟು ಅಳ ಆಗಲವನ್ನು ಹೊಂದಿದೆ ಎಂದು ಲೀಲಾಕುಮಾರಿ ಬಣ್ಣಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡಗರಹಳ್ಳಿ ಎಜುಕೇಷನ್ ಸೊಸೈಟಿಯ ಗೌರವ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್ ಆಂಗ್ಲ ಮಾಧ್ಯಮದ ವ್ಯಾಮೋಹ ಮತ್ತು ಪರಕೀಯರ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ಕನ್ನಡದ ಬೆಳವಣಿಗೆ ಕುಂಠಿತವಾಗುತ್ತಿದೆ. ಕೆಲವು ವಿದ್ಯಾವಂತರಿಂದ ಕನ್ನಡ ಅಳಿಯುತ್ತಿದ್ದು, ಅವಿದ್ಯಾವಂತರು ಕನ್ನಡವನ್ನು ಉಳಿಸಿ, ಬೆಳೆಸಿ, ಬಳಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ 7ನೇ ಹೊಸಕೋಟೆ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸೋಮಯ್ಯ, ಜನಪದ ಕಲೆಯ ಮೇಲಿನ ದಾಳಿ ಮತ್ತು ಕ್ಷೀಣಿಸುತ್ತಿರುವ ಕನ್ನಡಾಭಿಮಾನದ ಕುರಿತು ವಿವರಿಸಿದರು.
ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ನಾಗೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸುಂಟಿಕೊಪ್ಪ ಹೋಬಳಿ ಕಸಾಪ ಅಧ್ಯಕ್ಷ ಪಿ.ಎಫ್.ಸಬಾಸ್ಟಿನ್, ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕೆ.ಇಂದಿರಾ, ತಾಲ್ಲೂಕು ಕಸಾಪದ ಸಂಘಟನಾ ಕಾರ್ಯದರ್ಶಿ ಕೆ.ಬಿ.ದೇವಿಪ್ರಸಾದ್, ಖಜಾಂಚಿ ಉಮೇಶ್, ಸದಸ್ಯ ಬಿ.ಸಿ.ದಿನೇಶ್, ಸುಂಟಿಕೊಪ್ಪ ಹೋಬಳಿ ಘಟಕದ ಗೌರವ ಕಾರ್ಯದರ್ಶಿಗಳಾದ ಅನಿಲ್ , ಲೀಲಾ ಮೇದಪ್ಪ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.
ಕೆ.ಬಿ.ದೇವಿಪ್ರಸಾದ್ ಸ್ವಾಗತಿಸಿ, ಶಿಕ್ಷಕ ಶಿವಪ್ಪ ಗುರ್ಕಿ ನಿರೂಪಿಸಿ, ತಾಲೂಕು ಕಾರ್ಯದರ್ಶಿ ಟಿ.ವಿ.ಶೈಲಾ ವಂದಿಸಿದರು. ಇಲ್ಯಾಸ್ ಹಾಗೂ ಶ್ರೀಶ ಭಾವಗೀತೆ ಮತ್ತು ಭಾಷಣದ ಮೂಲಕ ಗಮನ ಸೆಳೆದರು. ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.