ಮಡಿಕೇರಿ ನ.16 : ಕನ್ನಡ ಚಲನಚಿತ್ರರಂಗದಲ್ಲಿ ಗುರುತಿಸಿಕೊಂಡ ಕೊಡಗಿನ ಮೊದಲ ಮಹಿಳಾ ನಿರ್ದೇಶಕಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಶಸ್ತಿ ವಿಜೇತ ನಿರ್ದೇಶಕಿ ಹಾಗೂ ನಿಮಾರ್ಪಕರಾದ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಈ ಬಾರಿಯ ಕೊಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಿಂಚಲಿದ್ದಾರೆ.
FIAPF ಮಾನ್ಯತೆ ಪಡೆದಿರುವ ವಿಶ್ವದ 16 ಚಲನ ಚಿತ್ರೋತ್ಸವದಲ್ಲಿ ಕೊಲ್ಕತ್ತಾ ಚಲನಚಿತ್ರೋತ್ಸವವು ಒಂದಾಗಿದೆ. ಡಿ.5 ರಿಂದ 12ರ ವರೆಗೆ ನಡೆಯಲಿರುವ 2023ನೇ ಸಾಲಿನ 29ನೇ ಕೊಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ನಿರ್ದೇಶಿಸಿರುವ 2ನೇ ಕನ್ನಡ ಚಲನಚಿತ್ರ “ಕಂದೀಲು” ನ್ಯಾಷನಲ್ ಕಾಂಪಿಟೀಷನ್ ನಲ್ಲಿ ಪ್ರದರ್ಶನಗೊಳ್ಳಲಿದೆ.
ಯಶೋಧ ಪ್ರಕಾಶ್ ಕೊಡವ ಭಾಷೆಯಲ್ಲೂ ಚಲನಚಿತ್ರ ನಿರ್ಮಾಣ ಮಾಡಿದ್ದು, ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. “ಕಂದೀಲು” ಚಿತ್ರದ ಬಾಲನಟಿಯಾಗಿ ಕೊಡಗಿನ ಈರಮಂಡ ಖುಷಿ ಕಾವೇರಮ್ಮ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಕಾಂತಾರಾ ಖ್ಯಾತಿಯ ಪ್ರಭಾಕರ ಬ.ಕುಂದರ, ವಿನೂತ್ ರಾಜೇಶ್, ವೆಂಕಟೇಶ್ ಪ್ರಸಾದ್, ಚಂದ್ರಕಾಂತ್ ಕೊಟ್ಟುಪಾಡಿ, ಈರಮಂಡ ಹರಿಣಿ ವಿಜಯ್ ನಟಿಸಿದ್ದಾರೆ. ಛಾಯಾಗ್ರಾಹಕರಾಗಿ ಸ್ವಾಮಿ ಗೂಗರ ದೊಡ್ಡಿ ಕಾರ್ಯನಿರ್ವಹಿಸಿದ್ದು, ಚಿತ್ರಕಥೆ-ಸಂಕಲನ ನಾಗೇಶ್ ಎಸ್. ಒದಗಿಸಿದ್ದಾರೆ.
::: ರಂಗಪ್ರವೇಶ :::
ತುಮಕೂರಿನ ಹುಳಿಯಾರು ಶ್ರೀ ಮಾತಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ನ.21 ರಂದು ಮಕ್ಕಳಿಗಾಗಿ ನಡೆಯುವ ಚಲನಚಿತ್ರೋತ್ಸವದಲ್ಲಿ ಮಧ್ಯಾಹ್ನ 2.30 ಗಂಟೆಗೆ ಹುಳಿಯಾರು ಸಾಂಸ್ಕೃತಿಕ ಭವನದಲ್ಲಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಅವರ ಮತ್ತೊಂದು ಸಿನಿಮಾ “ರಂಗಪ್ರವೇಶ” ಪ್ರದರ್ಶನ ಕಾಣಲಿದೆ.