ಸುಂಟಿಕೊಪ್ಪ ನ.16 : ಕಾಫಿ ಪುಡಿ ಅಂಗಡಿ ಮತ್ತು ವಾಹನ ಚಾಲನಾ ತರಬೇತಿ ಕೇಂದ್ರಕ್ಕೆ ಚೋರರು ನುಗ್ಗಿ ನಗದು ಹಾಗೂ ಮೊಬೈಲ್ ಫೋನ್ ಕಳ್ಳತನ ಮಾಡಿರುವ ಪ್ರಕರಣ ಸುಂಟಿಕೊಪ್ಪದಲ್ಲಿ ನಡೆದಿದೆ.
ಸುಂಟಿಕೊಪ್ಪ ಉಲುಗುಲಿ ರಸ್ತೆಯ ಶ್ರೀಚಾಮುಂಡೇಶ್ವರಿ ಕಾಫಿ ವರ್ಕ್ಸ್ ಗೆ ರಾತ್ರಿ ವೇಳೆ ಬೀಗ ಮುರಿದು ನುಗ್ಗಿದ ಕಳ್ಳರು 5 ಸಾವಿರ ರೂ. ನಗದು ಮತ್ತು ಬ್ಯಾಂಕ್ ಖಾತೆ ಪುಸ್ತಕಗಳನ್ನು ಕದ್ದೊಯ್ದಿದ್ದಾರೆ. ಅದೇ ರಸ್ತೆಯಲ್ಲಿದ್ದ ವೇದಾ ಮೋಟಾರ್ಸ್ ಡ್ರೈವಿಂಗ್ ಸ್ಕೂಲ್ ಗೆ ಲಗ್ಗೆ ಇಟ್ಟ ಚೋರರು ಮೊಬೈಲ್ ನ್ನು ಕೊಂಡೊಯ್ದಿದ್ದಾರೆ.
ಬೆಳಗ್ಗೆ ಅಂಗಡಿ ಮಾಲೀಕರು ಬಂದು ನೋಡಿದಾಗ ಬೀಗ ಮುರಿದಿರುವುದು ಗೋಚರಿಸಿದೆ. ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.










