ಮಡಿಕೇರಿ ನ.28 : ಕೊಡವ ಸ್ಪೋರ್ಟ್ಸ್ ಅಸೋಷಿಯೇಷನ್ ವತಿಯಿಂದ ವಿರಾಜಪೇಟೆಯ ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ ಅಯೋಜಿಸಲಾಗಿದ್ದ ಕೊಡವ ಪ್ರೀಮಿಯರ್ ಲೀಗ್‍ನ 2ನೇ ಆವೃತ್ತಿಯ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ಮೈಸೂರು ಮಕ್ಕ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಟೀಮ್ ಕೈಮಡ ತಂಡ ರನ್ನರ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಐ.ಪಿ.ಎಲ್ ಲೀಗ್ ಮಾದರಿಯಲ್ಲಿ ಆಯೋಜಿಸಲಾಗಿದ್ದ ಪಂದ್ಯಾಟದಲ್ಲಿ ಒಟ್ಟು 12 ತಂಡಗಳು ಭಾಗವಹಿಸಿದ್ದವು. ಮೈಸೂರು ಮಕ್ಕ, ಕೊಡವ ಟ್ರೈಬ್ಸ್, ಕೊಡವ ರಾಯಲ್ಸ್, ಬೆಂಗಳೂರು ಬಬ್ಬಂಗಾ, ಟೀಮ್ ಕೈಮಡ 2025, ಕೊಡವ ಬೀರಂಗಾ, ಅಂಜಿನಕೇರಿ ನಾಡ್ ಕೂಟ, ನಾಪೋಕ್ಲು ನರಿಯಾ, ಬೆಂಗಳೂರು ಟಸ್ಕರ್ಸ್ಸ್, ಎಂ.ಟಿ.ಬಿ. ರಾಯಲ್ಸ್, ಕೊಡವ ಕಡಾಸ್, ಮತ್ತು ಕರವಲೇ ಭಗವತಿ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಮೂರು ದಿನಗಳು ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಕೊನೆಯ ಹಂತಕ್ಕೆ 4 ತಂಡಗಳು ಪದಾರ್ಪಣೆ ಮಾಡಿದ್ದವು.
ಕೊಡವ ಟ್ರೈಬ್ಸ್ ತಂಡ ಮತ್ತು ಮೈಸೂರು ಮಕ್ಕ ತಂಡದ ನಡುವೆ ನಡೆದ ಎಲಿಮಿನೆಟ್ ಪಂದ್ಯಾಟದಲ್ಲಿ ಮೈಸೂರು ಮಕ್ಕ ತಂಡ 2 ವಿಕೆಟ್ ನಷ್ಟಕ್ಕೆ 24 ರನ್ ಗಳಿಸಿ 8 ವಿಕೆಟ್ ಗಳಿಂದ ಜಯಗಳಿಸಿ ಫೈನಲ್ ಪಂದ್ಯಾಟಕ್ಕೆ ಅರ್ಹತೆ ಪಡೆಯಿತು. ದ್ವೀತಿಯ ಎಲಿಮಿನೆಟ್ ಪಂದ್ಯಾಟದಲ್ಲಿ ಎಂ.ಟಿ.ಬಿ. ರಾಯಲ್ಸ್ ತಂಡ ನಿಗದಿತ 6 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 45 ರನ್‍ಗಳಿಸಲು ಮಾತ್ರವೇ ಶಕ್ತವಾಯಿತು. ಎದುರಾಳಿ ತಂಡ ನೀಡಿದ ಗುರಿಯ ಬೆನ್ನು ಹತ್ತಿದ ಟೀಮ್ ಕೈಮಡ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ ನಿಗದಿತ ಓವರ್‌ಗಳಲ್ಲಿ ಗುರಿ ತಲುಪಿ ಫೈನಲ್‍ಗೆ ಪ್ರವೇಶ ಪಡೆಯಿತು.
ಟೀಮ್ ಕೈಮಡ ಮತ್ತು ಮೈಸೂರು ಮಕ್ಕ ತಂಡಗಳ ನಡುವೆ ನಡೆದ ಪಂದ್ಯಾಟದಲ್ಲಿ ಮೈಸೂರು ಮಕ್ಕ ನಿಗದಿತ 6 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 94 ರನ್ ಗಳಿಸಿತು. ನಂತರ ಬ್ಯಾಟಿಂಗ್ ಆರಂಭಿಸಿದ ಟೀಮ್ ಕೈಮಡ ತಂಡ 7 ವಿಕೆಟ್ ನಷ್ಟಕ್ಕೆ 65 ರನ್‍ಗಳಿಸಿ ಸೋಲನುಭವಿಸಿತು. ಮೈಸೂರು ಮಕ್ಕ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.
ಚಾಂಪಿಯನ್ ಮೈಸೂರು ಮಕ್ಕ ತಂಡಕ್ಕೆ ಆಕರ್ಷಕ ಟ್ರೋಫಿ ಮತ್ತು 1.50 ಲಕ್ಷ ನಗದು, ರನ್ನರ್ಸ್ ಅಪ್ ಟೀಮ್ ಕೈಮಡ ತಂಡಕ್ಕೆ ಟ್ರೋಫಿ ಮತ್ತು 75 ಸಾವಿರ ನಗದು, ತೃೀತಿಯ ಸ್ಥಾನಗಳಿಸಿದ ಟೀಮ್ ಕೊಡವ ಟ್ರೈಬ್ಸ್‍ಗೆ ಟ್ರೋಫಿ ಮತ್ತು 30 ಸಾವಿರ ನಗದು, ಹಾಗೂ 4ನೇ ಸ್ಥಾನ ಪಡೆದ ಎಂ.ಟಿ.ಬಿ. ರಾಯಲ್ಸ್ ತಂಡಕ್ಕೆ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಯಿತು. ಫೈನಲ್ ಪಂದ್ಯ ಪುರುಷೋತ್ತಮ, ಸರಣಿ ಪುರುಷೋತ್ತಮ ಮತ್ತು ಬೆಸ್ಟ್ ಬ್ಯಾಟ್ಸ್‍ಮನ್, ಬೆಸ್ಟ್ ಬೌಲರ್, ಬೆಸ್ಟ್ ಕೀಪರ್, ಬೆಸ್ಟ್ ಫೀಲ್ಡರ್ ಸೇರಿದಂತೆ ಕ್ರೀಡಾಪಟುಗಳಿಗೆ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಕೊಡವ ಸ್ಪೋರ್ಟ್ಸ್ ಅಸೋಷಿಯೇಷನ್ ಸಂಸ್ಥೆಯ ಕಾರ್ಯದರ್ಶಿ ಓಡಿಕಂಡ ಮಾಚಯ್ಯ, ಚೆಕ್ಕೇರ ಕಾರ್ಯಪ್ಪ, ಮುಕ್ಕಾಟೀರ ದೀಪಕ್, ಕುಟ್ಟಂಡ ರಂಜನ್ ಕಾರ್ಯಪ್ಪ, ಸೇರಿದಂತೆ ವಿವಿಧ ತಂಡಗಳ ಮಾಲೀಕರು, ಕ್ರೀಡಾ ಪಟುಗಳು, ಕ್ರೀಡಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.