ಮಡಿಕೇರಿ ಡಿ.11 : ಬಿಲ್ಲವ ಸಮುದಾಯದ ತಂಡಗಳ ನಡುವೆ ನಡೆದ ಪೂಜಾರಿ ಪ್ರೀಮಿಯರ್ ಲೀಗ್ ಪ್ರಥಮ ಆವೃತ್ತಿಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಯಲ್ ಪೂಜಾರಿ ಕೊಡಗು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಮರಗೋಡುವಿನ ಭಾರತಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬಿಲ್ಲವ ಟೈಗರ್ಸ್ ಅಮ್ಮತ್ತಿ ತಂಡವನ್ನು 26 ರನ್‍ನಿಂದ ಮಣಿಸಿ ಪ್ರಶಸ್ತಿ ಗೆದ್ದಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಯಲ್ ಪೂಜಾರಿ ಕೊಡಗು ತಂಡ ನಿಗದಿತ 5 ಓವರ್‍ನಲ್ಲಿ 3 ವಿಕೆಟ್ ಕಳೆದುಕೊಂಡು 78 ರನ್ ಗಳಿಸಿತು. ಶ್ರೀನಾಥ್ ಪೂಜಾರಿ 29, ವಿನು ಪೂಜಾರಿ 18, ತ್ರಿಲೇಶ್ 17, ಬಬಿತ್ ಪೂಜಾರಿ 12 ರನ್ ಗಳಿಸಿದರು.
ಗೆಲುವಿನ ಗುರಿ ಬೆನ್ನತ್ತಿದ ಬಿಲ್ಲವಟೈಗರ್ಸ್ ಅಮ್ಮತ್ತಿತಂಡ 5 ಓವರ್‍ನಲ್ಲಿ 5 ವಿಕೆಟ್ ಕಳೆದುಕೊಂಡು 52 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ತಂಡದ ಪರ ಶರಣ್ 21 ರನ್ ದಾಖಲಿಸಿದರು. ರಾಯಲ್ ಪೂಜಾರಿ ತಂಡದ ಬಬಿತ್ ಪೂಜಾರಿ 2 ವಿಕೆಟ್ ಕಬಳಿಸಿದರು.
ಇದಕ್ಕೂ ಮುನ್ನ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಬಿಲ್ಲವಟೈಗರ್ಸ್ ಅಮ್ಮತ್ತಿ ತಂಡವನ್ನು ಸೂಪರ್ ಓವರ್‍ನಲ್ಲಿ ಮಣಿಸಿ ರಾಯಲ್ ಪೂಜಾರಿ ತಂಡ ಫೈನಲ್ ಪ್ರವೇಶಿಸಿತು. ಎರಡನೆ ಕ್ವಾಲಿಫೈಯರ್ ಪಂದ್ಯದಲ್ಲಿ ಬಿಲ್ಲವ ಪ್ಯಾಂಥರ್ಸ್ ವಿರುದ್ಧ 7 ರನ್‍ಅಂತರದ ಗೆಲುವು ಸಾಧಿಸಿದ ಅಮ್ಮತ್ತಿ ತಂಡ ಫೈನಲ್‍ಗೆ ಅರ್ಹತೆ ಗಿಟ್ಟಿಸಿತು. ಬಿಲ್ಲವ ಪ್ಯಾಂಥರ್ಸ್ ತಂಡ ತೃತೀಯ ಬಹುಮಾನಕ್ಕೆ ತೃಪ್ತಿಪಟ್ಟಿತು.
ಬಹುಮಾನ ವಿತರಣೆ : ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತತಂಡ ಹಾಗೂ ವೈಯಕ್ತಿಕ ಸಾಧನೆ ಮಾಡಿದ ಆಟಗಾರರಿಗೆ ಬಹುಮಾನ ವಿತರಿಸಲಾಯಿತು. 44,444 ರೂ ನಗದು ಹಾಗೂ ಟ್ರೋಫಿ(ಪ್ರ), 24,444 ರೂ. ನಗದು ಹಾಗೂ ಟ್ರೋಫಿ, ತೃತೀಯ ಸ್ಥಾನ ಪಡೆದ ತಂಡಕ್ಕೆ ಟ್ರೋಫಿ ನೀಡಲಾಯಿತು. ಜಿಲ್ಲೆಯ ವಿವಿಧೆಡೆಯ ಬಿಲ್ಲವ ಸಮುದಾಯದ ಆಟಗಾರರನ್ನೊಳಗೊಂಡ 10 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ತೀರ್ಪುಗಾರರಾಗಿ ಧ್ರುವ, ಪ್ರಿನ್ಸ್ ಕುಶಾಲಪ್ಪ, ಪ್ರಮೋದ್ ಕಾರ್ಯನಿರ್ವಹಿಸಿದರು. ಕಿಶೋರ್ ರೈ ಕತ್ತಲೆಕಾಡು, ಪ್ರೇಮ್ ಕಡಗದಾಳು ವೀಕ್ಷಕ ವಿವರಣೆ ನೀಡಿದರು.
ವೈಯಕ್ತಿಕ ಬಹುಮಾನ : ರಾಯಲ್ ಪೂಜಾರಿ ತಂಡದ ಶ್ರೀನಾಥ್ ಪೂಜಾರಿ ಅಂತಿಮ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿ, ತ್ರಿಲೇಶ್ ಟೂರ್ನಿಯಲ್ಲಿ ಹೆಚ್ಚು ಸಿಕ್ಸರ್ ಭಾರಿಸಿದ ಆಟಗಾರ ಹಾಗೂ ಅತ್ಯುತ್ತಮ ಬ್ಯಾಟರ್, ಸಂಚಿತ್ ಬಿ.ಟಿ. ಟೂರ್ನಿಯ ಅತ್ಯುತ್ತಮ ಬೌಲರ್, ಬಬಿತ್ ಪೂಜಾರಿ ಉತ್ತಮ ಕ್ಷೇತ್ರರಕ್ಷಕ ಹಾಗೂ ಪಂದ್ಯಾವಳಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು. ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ರಾಯಲ್ ಪೂಜಾರಿ ತಂಡದ ಬಿಬಿತ್ ಭಾಜನರಾದರು.
ಸಮಾರೋಪ : ಪೂಜಾರಿ ಪ್ರೀಮಿಯರ್ ಲೀಗ್ ಸಮಿತಿ ಅಧ್ಯಕ್ಷ ತೇಜಸ್ ಬಂಗೇರ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಜರುಗಿತು. ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಮೋಹನ್ ಮಧು, ದಿನೇಶ್ ಪೂಜಾರಿ, ಪ್ರದೀಪ್ ಪೂಜಾರಿ, ಪ್ರಭುಶೇಖರ್, ಅನಿಲ್ ಸೀನಪ್ಪ, ಬಿಲ್ಲವ ಸಮಾಜದ ಪ್ರಮುಖರಾದ ಸುಧೀರ್‍ಎಸ್. ಪೂಜಾರಿ, ಗಣೇಶ್ ಪೂಜಾರಿ, ದಿಲೀಪ್ ಪೂಜಾರಿ, ವಿದ್ವಾನ್ ಪೂಜಾರಿ, ವಕೀಲ ಸತೀಶ್ ಪೂಜಾರಿ, ಆಯೋಜನಾ ಸಮಿತಿಯ ಬಬಿತ್ ಪೂಜಾರಿ, ಸುಜಯ್ ಬಂಗೇರ, ಭುವನ್ ಪೂಜಾರಿ, ಲಿಖಿತ್ ಪೂಜಾರಿ, ಕಿರಣ್ ಪೂಜಾರಿ ಮತ್ತಿತರರು ಹಾಜರಿದ್ದರು.









