ಮಡಿಕೇರಿ ಡಿ.11 : ಗ್ರಾಮ ಪಂಚಾಯಿತಿಗಳ ಸರ್ವತೋಮುಖ ಅಭಿವೃದ್ದಿಗಳಿಗೆ ಸಹಕರಿಸಿ ಪ್ರಗತಿ ಸಾಧಿಸಿ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣೀತ್ ನೇಗಿ ತಿಳಿಸಿದ್ದಾರೆ.
ಪೊನ್ನಂಪೇಟೆ ತಾಲ್ಲೂಕಿನ ಸಾಮರ್ಥ್ಯ ಸೌಧದಲ್ಲಿ ಗ್ರಾ.ಪಂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮ ಪಂಚಾಯಿತಿಗಳು ಸಾರ್ವಜನಿಕರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಿ ಪ್ರಗತಿ ಸಾಧಿಸಲು ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ನರೇಗಾ ಯೋಜನೆಯಡಿ ಮಾನವ ದಿನಗಳ ಸೃಜನೆ ಕುಂಠಿತವಾಗಿದ್ದು, ಮುಂದಿನ ದಿನಗಳಲ್ಲಿ ಪ್ರಗತಿ ಸಾಧಿಸಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಶಾಲಾ ಶೌಚಾಲಯಗಳು ನಿರ್ಮಾಣವಾಗುತ್ತಿದ್ದು , ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚನೆ ನೀಡಿದರು.
ಈಗಾಗಲೇ ಕೂಸಿನ ಮನೆ ಆರೈಕೆದಾರರಿಗೆ ತರಬೇತಿ ನೀಡಲಾಗಿದ್ದು , 3 ವರ್ಷದೊಳಗಿನ ನರೇಗಾ ಕೂಲಿ ಕಾರ್ಮಿಕರ ಮಕ್ಕಳನ್ನು ಕೂಸಿನ ಮನೆಯಲ್ಲಿ ಆರೈಕೆ ಮಾಡಬಹುದಾಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಲು ಪ್ರಚಾರ ಕೈಗೊಂಡು ನೋಂದಣಿ ಮಾಡಿಸುವಂತೆ ಸಂಬಂಧಪಟ್ಟ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಸೂಚಿಸಿದರು.
PM- ವಿಶ್ವಕರ್ಮ ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ ಮಾಡಿ ಅರ್ಹಫಲಾನುಭವಿಗಳಿಗೆ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕ್ರಮವಹಿಸಿ ಹಾಗೂ ವಸತಿ ಯೋಜನೆಯಡಿ ಇನ್ನೂ ಪ್ರಾರಂಭವಾಗದೇ ಉಳಿದಿರುವ ಮನೆಗಳನ್ನು ಕೂಡಲೇ ಪ್ರಾರಂಭಿಸಲು ತಿಳಿಸಿದರು.
ಜಲ ಜೀವನ್ ಮಿಷನ್ : ಮುಂದಿನ ದಿನಗಳಲ್ಲಿ ಬೇಸಿಗೆ ಎದುರಾಗುತ್ತಿದ್ದು ಕುಡಿಯುವ ನೀರಿಗೆ ಯಾವುದೇ ರೀತಿಯ ಸಮಸ್ಯೆಯಾಗಬಾರದು ಎಲ್ಲಾ ಮನೆಗಳಿಗೂ ಕುಡಿಯುವ ನೀರನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ಸೂಚನೆ ನೀಡಿದರು. ಗ್ರಾಮ ಪಂಚಾಯಿತಿಗಳಲ್ಲಿ ಕಸ ವಿಲೇವಾರಿ ಸಂಬಂಧ ಸಮಸ್ಯೆಗಳ ಕುರಿತು ಚರ್ಚಿಸಿದರು.
ಇದೇ ಸಂದರ್ಭದಲ್ಲಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಪ್ಪಣ್ಣ , ಪೊನ್ನಂಪೇಟೆ ತಾಲ್ಲೂಕಿನ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು, ವಿಷಯ ನಿರ್ವಾಹಕರಾದ ಗಯಾ, ಶಿವನಂಜಯ್ಯ ,ತಾಂತ್ರಿಕ ಸಂಯೋಜಕರಾದ ನಿರಂಜನ್,ತಾಲ್ಲೂಕು ವಸತಿ ನೋಡಲ್ ಅಧಿಕಾರಿಗಳಾದ ಅಸ್ಲಂ ಪಾಷ, ತಾಲೂಕು ಐ.ಇ.ಸಿ ಸಂಯೋಜಕರುಗಳಾದ ನರೇಂದ್ರ , ಅರುಣ್ ಹಾಗೂ ಇತರರು ಉಪಸ್ಥಿತರಿದ್ದರು.









