ವಿರಾಜಪೇಟೆ ಡಿ.12 : ಹೆಗ್ಗಳ ಗ್ರಾಮದಲ್ಲಿರುವ ಎಡಮಕ್ಕಿ ಶ್ರೀ ಅಯ್ಯಪ್ಪ ಸ್ವಾಮಿ ದೇವರ ವಾರ್ಷಿಕ ಮಹೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.
ಮೊದಲ ದಿವಸ ದೀಪಾರಾಧನೆ ಹಾಗೂ ಮಹಾಪೂಜೆ ಸೇವೆಗಳು ನಡೆಯಿತು. ಎರಡನೇ ದಿವಸ ದೇವಾಲಯದಲ್ಲಿ ಗಣಪತಿ ಹೋಮ, ಧ್ವಜಾರೋಹಣ ಹಾಗೂ ಮಹಾಪೂಜೆ ನಡೆಯಿತು. ಮಧ್ಯಾಹ್ನ ಶ್ರೀ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆ ಮಾಡಲಾಯಿತು.
ಸಂಜೆ ದೀಪಾರಾಧನೆ ಹಾಗೂ ಎಡಮಕ್ಕಿ ಸಾರ್ವಜನಿಕ ಮೈದಾನದಿಂದ ತಾಲಪ್ಪೊಲಿ ಮೆರವಣಿಗೆ ನಡೆಯಿತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ನೆರೆದಿದ್ದರು.
ರಾತ್ರಿ ಮಾನಂದವಾಡಿಯ ಶ್ರೀ ಭಗವತಿ ಚಂಡೆ ವಾದ್ಯಮ್ ರಿಂದ ತಾಯಂಭಗಂ ಸೇವೆ ಜರುಗಿತು. ಮಹಾಪೂಜೆ ಅನ್ನದಾನ ಕಾರ್ಯಕ್ರಮ ನಡೆದವು. ಮಾತ್ರವಲ್ಲದೆ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಮಹೇಶ್, ಮಹಿ ಕೂರ್ಗ್ ಇವರಿಂದ ಸಿಡಿಮದ್ದಿನ ಪ್ರದರ್ಶನ ನಡೆಯಿತು. ವಾರ್ಷಿಕ ಮಹೋತ್ಸವದಲ್ಲಿ ಕೊಡಗು ಜಿಲ್ಲೆ, ಕೇರಳ, ತಮಿಳುನಾಡಿನಿಂದಲೂ ಭಕ್ತರು ಆಗಮಿಸಿದ್ದರು. ಪೂಜಾ ಕಾರ್ಯಕ್ರಮಗಳು ದೇವಸ್ಥಾನದ ಮುಖ್ಯ ತಂತ್ರಿಗಳಾದ ಬ್ರಹ್ಮಶ್ರೀ ಮುಳ್ಳಪಲ್ಲಿ ಕೃಷ್ಣನ್ ನಂಬೂದಿರಿ ಮತ್ತು ದೇವಸ್ಥಾನದ ಪ್ರಧಾನ ಅರ್ಚಕ ವೇಣುಗೋಪಾಲ್ ಭಟ್ ಅವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.