ಸಿದ್ದಾಪುರ ಡಿ.22 : 3 ವೀಲರ್ಸ್ ಕ್ರಿಕೆಟರ್ಸ್ ಅಮ್ಮತ್ತಿ ಆಟೋ ಚಾಲಕರ ಸಂಘದ ವತಿಯಿಂದ ಆಟೋ ಚಾಲಕರಿಗಾಗಿ ಅಮ್ಮತ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿ ನಡೆಯಿತು.
ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಜಿ.ಪಂ ಮಾಜಿ ಸದಸ್ಯ ಮೂಕೊಂಡ ವಿಜು ಸುಬ್ರಮಣಿ ಮಾತನಾಡಿ, ಹಲವು ಸಂಕಷ್ಟಗಳ ನಡುವೆ ಬದುಕು ಸಾಗಿಸುತ್ತಿರುವ ಆಟೋ ಚಾಲಕರ ಬೇಡಿಕೆಗಳನ್ನು ಸರ್ಕಾರ ಈಡೇರಿಸುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಕೂಡಲೇ ನೀಡಬೇಕು. ಶಿಕ್ಷಣ ಕಲಿತರು ನಿರುದ್ಯೋಗ ಸಮಸ್ಯೆಯಿಂದ ಸಾಲ ಮಾಡಿ ಆಟೋ ಚಾಲನೆ ಮಾಡಿ ತಮ್ಮ ಕುಟುಂಬ ಜೀವನ ನಡೆಸುತ್ತಿದ್ದಾರೆ.
ಸರ್ಕಾರದ ಉಚಿತ ಯೋಜನೆಯಿಂದ ಮತ್ತೆ ಆಟೋ ಚಾಲಕರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು,
ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಆಟೋ ಚಾಲಕರ ಕುಟುಂಬಗಳು ನಿವೇಶನ ಸೂರು ಇಲ್ಲದೆ ಸಂಕಷ್ಟದಲ್ಲಿದ್ದಾರೆ ಎಂದರು.
ಸರ್ಕಾರ ಆಟೋ ಚಾಲಕರಿಗೆ ಎಲ್ಲಾ ಸೌಲಭ್ಯಗಳನ್ನು ನೀಡುವುದರ ಮೂಲಕ ಚಾಲಕರ ಬೇಡಿಕೆಯನ್ನು ಕೂಡಲೇ ಈಡೇರಿಸಬೇಕು. ಆಟೋ ಚಾಲಕರು ಸಂಕಷ್ಟದ ಜೀವನದೊಂದಿಗೆ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವುದರ ಮೂಲಕ ಚಾಲಕರಿಗೆ ಆತ್ಮಸ್ಥೈರ್ಯ ತುಂಬುವ ಸಂಘದ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾಜ ಸೇವಕ ಸಂಕೇತ್ ಪೂವಯ್ಯ ಮಾತನಾಡಿ, ಆಟೋ ಚಾಲಕರು ಸಂಘಟನೆಯ ಮೂಲಕ ಶಕ್ತರಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಮುನ್ನಡೆಯುತ್ತಿರುವುದು ಶ್ಲಾಘನೀಯ.

ಯಾವುದೇ ತುರ್ತು ಸಂದರ್ಭದಲ್ಲಿ ಜನರಿಗೆ ತುಂಬಾ ಹತ್ತಿರವಾಗಿರುವವರು ಆಟೋ ಚಾಲಕರು.
ಹಗಲು ರಾತ್ರಿ ಎನ್ನದೆ ನಿಸ್ವಾರ್ಥ ಸೇವೆ ಮಾಡುವುದರ ಮೂಲಕ ಆಟೋ ಚಾಲಕರು ಮಾದರಿಯಾಗಿದ್ದಾರೆ.
ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಸಮಾಜದ ಮುಖ್ಯ ವಾಹಿನಿಗೆ ಬರುವದರೊಂದಿಗೆ
ಆರ್ಥಿಕವಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕೆಂದರು.
ಈ ಸಂದರ್ಭ ಆಟೋ ಚಾಲಕರು ಹಾಗೂ ಮಾಲಿಕರ ಸಂಘದ ಅಧ್ಯಕ್ಷ ಅಭಿಜಿತ್, ಠಾಣಾಧಿಕಾರಿ ವಾಣಿಶ್ರೀ, ಎ.ಎಸ್.ಐ ಸೋಮಣ್ಣ, ಸಮಾಜ ಸೇವಕರಾದ ಸಂತೋಷ್, ಅನಿಲ್, ತನ್ವೀರ್, ನಾಣಯ್ಯ, ರಿಚರ್ಡ್, ಡೇವಿಡ್ ಡಿಸೋಜಾ ಸೇರಿದಂತೆ ಆಟೋ ಚಾಲಕರು ಹಾಜರಿದ್ದರು.
ತಾಲ್ಲೂಕಿನ 11 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.










