ಮಡಿಕೇರಿ ಡಿ.22 : ನಗರಸಭೆಯ ಪೌರಾಯುಕ್ತರು ಸಮಾನ್ಯ ಸಭೆಯಲ್ಲಿ ಮರಣದಂಡನೆಯ ಮಾತನಾಡಿದ್ದು, ಇದು ಅತ್ಯಂತ ವಿಷಾದಕರ ಬೆಳವಣಿಗೆಯಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸದಸ್ಯರು ಹಾಗೂ ಅಧಿಕಾರಿಗಳು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಬೇಕೆ ಹೊರತು ಮಾನಸಿಕ ಒತ್ತಡ ನೀಡಬಾರದು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ನಗರದ ಅಭಿವೃದ್ಧಿಗೆ ಸದಸ್ಯರು ಹಾಗೂ ಅಧಿಕಾರಿಗಳು ಒಗ್ಗಟ್ಟಾಗಿ ಜೋಡೆತ್ತುಗಳಂತೆ ದುಡಿಯಬೇಕಾಗುತ್ತದೆ. ಆದರೆ ನಗರಸಭೆಯಲ್ಲಿ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತಿದ್ದು, ಇದು ಸಾರ್ವಜನಿಕರ ಕೆಲಸ ಕಾರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ನಗರಸಭೆಯ ಇತಿಹಾಸದಲ್ಲೇ ಈ ರೀತಿಯ ಅಸಹಾಯಕ ಆಡಳಿತವನ್ನು ಜನರು ನೋಡಿರಲಿಲ್ಲ. ಯಾವುದೇ ಪೌರಾಯುಕ್ತರು ಮರಣದಂಡನೆ ನೀಡಿ ಎಂದು ಹೇಳಿರಲಿಲ್ಲ. ಅಧಿಕಾರಿಯೊಬ್ಬರು ತುಂಬಿದ ಸಭೆಯಲ್ಲಿ ಈ ರೀತಿಯ ಹೇಳಿಕೆ ನೀಡಿದ್ದಾರೆ ಎಂದರೆ ಮಾನಸಿಕ ಒತ್ತಡದ ನಡುವೆ ಅವರು ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವುದು ಸಾಬೀತಾಗಿದೆ. ಹಲವು ಅಧಿಕಾರಿಗಳು ಈಗಾಗಲೇ ವರ್ಗಾವಣೆ ಪಡೆದುಕೊಂಡು ತೆರಳಿದ್ದಾರೆ. ಉಳಿದ ಅಧಿಕಾರಿಗಳು ಕೂಡ ಇದೇ ದಾರಿ ಹಿಡಿದರೆ ನಗರಸಭೆ ಖಾಲಿಯಾಗಿ ಬೀಗ ಹಾಕುವ ಪರಿಸ್ಥಿತಿ ಬರಬಹುದು. ಆದ್ದರಿಂದ ಬಹುಮತದಿಂದ ಆಡಳಿತ ನಡೆಸುತ್ತಿರುವ ಬಿಜೆಪಿ ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಾಗುತ್ತದೆ. ಎಲ್ಲಾ ತಪ್ಪುಗಳನ್ನು ಅಧಿಕಾರಿಗಳ ಮೇಲೆಯೇ ಹಾಕುವುದು ಸರಿಯಲ್ಲ.
ಆಡಳಿತ ಮಂಡಳಿಯಲ್ಲಿ ಹೆಚ್ಚು ವಿದ್ಯಾವಂತರೇ ಇದ್ದಾರೆ, ಆದರೆ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವ ಚಿಂತನೆ ಯಾರಿಗೂ ಇಲ್ಲದಾಗಿದೆ. ಜನರಿಂದ ಆಯ್ಕೆಯಾಗಿ ಬಂದ ಜನಪ್ರತಿನಿಧಿಗಳು ಜನರಿಗೆ ಅನುಕೂಲ ಕಲ್ಪಿಸಲು ಅಧಿಕಾರಿಗಳೊಂದಿಗೆ ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ. ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸುವ ಇಚ್ಛಾಶಕ್ತಿಯೂ ಬೇಕಾಗುತ್ತದೆ.
ಇನ್ನಾದರೂ ನಗರಸಭಾ ಅಧ್ಯಕ್ಷರು ಅಧಿಕಾರಿಗಳ ವಿಶೇಷ ಸಭೆ ಕರೆದು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವುದು ಸೂಕ್ತ. ಸ್ವಪ್ರತಿಷ್ಠೆಗಾಗಿ ಸದಸ್ಯರು ಅಧಿಕಾರಿಗಳನ್ನು ಕಡೆಗಣಿಸಿದರೆ ಅದರ ದುಷ್ಪರಿಣಾಮ ಜನರ ಮೇಲಾಗುತ್ತದೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದು ಕೆ.ಪಿ.ಚಂದ್ರಕಲಾ ಒತ್ತಾಯಿಸಿದ್ದಾರೆ.










