ಸಿದ್ದಾಪುರ ಡಿ.22 : ಕಾನೂನು ಅರಿವಿನ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು
ಕಿರು ಉದ್ಯಮ ಶೀಲತೆ ಅಭಿವೃದ್ಧಿಯ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್ ಸಲಹೆ ನೀಡಿದರು.
ನಬಾರ್ಡ್ ಮತ್ತು ಓಡಿಪಿ ಸಂಸ್ಥೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಭಾಗಿತ್ವದಲ್ಲಿ
ವಾಲ್ನೂರು ಗ್ರಾ.ಪಂ ವ್ಯಾಪ್ತಿಯ ಬಾಳೆಗುಂಡಿ ಹಾಡಿಯಲ್ಲಿ ಕಾನೂನು ಅರಿವು ಹಾಗೂ ಅಭಿವೃದ್ಧಿ ಕಾರ್ಯಗಳ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬುಡಕಟ್ಟು ಆದಿವಾಸಿಗಳು
ಶಿಕ್ಷಣದ ಮೂಲಕ ಕಾನೂನು ಅರಿವನ್ನು ಪಡೆದುಕೊಂಡು ಅಭಿವೃದ್ಧಿಯೊಂದಿಗೆ ಸಮಾಜದಲ್ಲಿ ಗುರುತಿಸಿಕೊಂಡು ಮುನ್ನಡೆದಲ್ಲಿ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.
ನಬಾರ್ಡ್‍ನ ಮಹಾ ಪ್ರಬಂಧಕ ಡಾ.ಕೆ.ಎಸ್.ಮಹೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,
ಹಲವು ವರ್ಷಗಳಿಂದಲೂ ಬುಡಕಟ್ಟು ಆದಿವಾಸಿ ಸಮುದಾಯ ಬಾಂಧವರನ್ನ ಕಿರು ಉದ್ಯಮ ಶೀಲತೆ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮಹಿಳಾ ಸಬಲೀಕರಣ ಯೋಜನಾ ಅಡಿಯಲ್ಲಿ ಕೌಶಲ್ಯ ತರಬೇತಿಗಳನ್ನು ನೀಡಲಾಗುತ್ತಿದೆ. ಓಡಿಪಿ ಸಂಸ್ಥೆಯ ಮೂಲಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಇದರ ಯೋಜನೆಗಳನ್ನು
ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಅಭಿವೃದ್ಧಿಯೊಂದಿಗೆ ಮುನ್ನಡೆಯಬೇಕೆಂದರು.
ನಬಾರ್ಡ್ ಸಂಸ್ಥೆಯ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ರಮೇಶ್ ಬಾಬು ಮಾತನಾಡಿ, ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಲು ಅಗತ್ಯ ದಾಖಲಾತಿಗಳನ್ನು ಹೊಂದಿಕೊಳ್ಳಬೇಕಾಗಿದೆ. ನಬಾರ್ಡ್ ಸಂಸ್ಥೆ ಓಡಿಪಿ ಸಂಸ್ಥೆಯ ಮೂಲಕ ಗ್ರಾಮೀಣ ಭಾಗದಲ್ಲಿ ಹಿಂದುಳಿದಿರುವ ಆದಿವಾಸಿ ಕುಟುಂಬಗಳಿಗೆ ಕೋಳಿ, ಹಂದಿ, ಜೇನು, ಕೃಷಿಯೊಂದಿಗೆ ಆರ್ಥಿಕವಾಗಿ ಸ್ವಉದ್ಯೋಗದೊಂದಿಗೆ ಸ್ವಾವಲಂಬಿಗಳಾಗಿ ಅಭಿವೃದ್ಧಿ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಮುಂದೆ ಬರಬೇಕೆಂದರು.
ಓಡಿಪಿ ಸಂಸ್ಥೆಯ ನಿರ್ದೇಶಕ ವಂದನಿಯ ಗುರು ಸ್ವಾಮಿ ಅಲೆಕ್ಸ್ ಪ್ರಶಾಂತ್ ಸಿಕ್ವೆರ ಮಾತನಾಡಿ, ನಬಾರ್ಡ್ ಸಂಸ್ಥೆಯ ಸಹಕಾರದೊಂದಿಗೆ ಒಡಿಪಿ ಸಂಸ್ಥೆ ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಸ್ವಹುದ್ಯೋಗದೊಂದಿಗೆ ಸ್ವಾವಲಂಬಿಗಳಾಗಿ ಜೀವನ ನಡೆಸಲು ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಬಾಳೆಗುಂಡಿ ಹಾಡಿಯ 100 ಕುಟುಂಬಗಳನ್ನ ಆಯ್ಕೆ ಮಾಡಿಕೊಳ್ಳಲಾಗಿದೆ. ಜೀವನೋಪಾಯ ಅಭಿವೃದ್ಧಿ ಯೋಜನೆಗಳ ಮೂಲಕ ಎರಡನೇ ಹಂತದ ಕೋಳಿಮರಿ ವಿತರಣೆ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಹಂದಿ ಜೇನು ಸಾಕಾಣಿಕೆಗೆ ಸಹಕಾರ ನೀಡಲಾಗುವುದು
ಬುಡಕಟ್ಟು ಬಂದವರು ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಮುಖ್ಯ ವಾಹಿನಿಗೆ ಬರಬೇಕೆಂದರು.
ಈ ಸಂದರ್ಭ ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುಳಾ , ಪಶು ಸಂಗೋಪನೆ ಇಲಾಖೆಯ ಲಿಂಗರಾಜು, ಸೋಮವಾರಪೇಟೆ ತಾಲೂಕು ಗಿರಿಜನ ವಿಸ್ತರಣಾಧಿಕಾರಿ ಧರ್ಮಮ್ಮ, ಮೈಸೂರು ಓಡಿಪಿ ಸಂಸ್ಥೆಯ.
ಮೋಳಿ ಪೂಡ್ತದೂ, ಬಾಳೆಗುಂಡಿ ಹಾಡಿಯ ಆದಿವಾಸಿ ಮುಖಂಡ ರಮೇಶ್, ಓಡಿಪಿ ಸಂಸ್ಥೆಯ ಯೋಜನಾ ಸಂಯೋಜಕ ಮೇಲ್ವಿನ್, ಸಂಯೋಜಕರಾದ ಜೋಯ್ಸ್ ಮೆನೇಜಸ್, ಕಾರ್ಯಕರ್ತರಾದ ಧನು ಕುಮಾರ್, ಮಮತಾ, ಶಿಕ್ಷಕಿ ರೇಷ್ಮಾ ಸೇರಿದಂತೆ ಮತ್ತಿತರರು ಹಾಜರಿದ್ದರು.










