ವಿರಾಜಪೇಟೆ ಡಿ.23 : ವಿರಾಜಪೇಟೆ ಹೊರ ವಲಯದ ಚೆಂಬೆಬೆಳ್ಳೂರು ಗ್ರಾಮದ ತೆಕ್ಕಮಕ್ಕಿ ಎಂಬಲ್ಲಿ ದಲಿತ ಸಂಘರ್ಷ ಸಮಿತಿಯ ನೂತನ ಘಟಕವನ್ನು ಉದ್ಘಾಟಿಸಲಾಯಿತು.
ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಅಧಿಕಾರಿ ವಾಣಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಯಾವುದೇ ರೀತಿಯ ಸಮಸ್ಯೆಯಾದರೆ ನನ್ನನ್ನು ನೇರವಾಗಿ ಸಂಪರ್ಕಿಸಿ. ಇಲ್ಲಿನ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣ ನೀಡುವಂತಾಗಲಿ, ಸರ್ಕಾರದ ಸೌಲಭ್ಯಗಳು ಎಲ್ಲರಿಗೂ ಸಿಗುವಂತಾಗಲಿ ಎಂದರು.
ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಉಪಾಧ್ಯಕ್ಷ ಎಚ್.ಜಿ ಗೋಪಾಲ ಮಾತನಾಡಿ, ನಮಗೆ ತಿಳಿಯದೆ ಇರುವ ಅನೇಕ ದಲಿತ ಕುಟುಂಬಗಳು ಈ ನಮ್ಮ ಕೊಡಗಿನ ವಿವಿಧ ಭಾಗಗಳಲ್ಲಿ ಇದ್ದಾರೆ, ಅವರಿಗೆ ಸರ್ಕಾರದ ವತಿಯಿಂದ ಸರಿಯಾದ ರೀತಿಯಲ್ಲಿ ಸರ್ಕಾರದ ಸೌಲಭ್ಯಗಳು ಸಿಗುತ್ತಿಲ್ಲ, ಕೆಲವರಿಗೆ ಇದರ ಬಗ್ಗೆ ಮಾಹಿತಿ ಕೂಡ ಇರುವುದಿಲ್ಲ, ಚೆಂಬೆಬೆಳ್ಳೂರು ಗ್ರಾಮದಲ್ಲಿ ಸುಮಾರು ಹದಿನೈದು ದಲಿತ ಕುಟುಂಬವೂ ಹಲವಾರು ವರ್ಷಗಳಿಂದ ನಿರಂತರವಾಗಿ ಇಲ್ಲಿ ವಾಸ ಮಾಡುತ್ತಿವೆ, ಇವರಿಗೆ ಸರ್ಕಾರದ ಯಾವುದೇ ಸೌಲಭ್ಯ ಸಿಗದೆ ವಂಚನೆಗೊಳಗಾಗಿದ್ದಾರೆ. ಇಲ್ಲಿ ವಾಸ ಮಾಡುವ ಮನೆಗಳಿಗೆ ಯಾವುದೇ ಹಕ್ಕು ಪತ್ರ ಸರಿಯಾಗಿ ಇರುವುದಿಲ್ಲ. ಇಲ್ಲಿ ಒಂದು ಸಮುದಾಯ ಭವನ ಇದೆ. ಈ ಭವನವನ್ನು ಸರ್ಕಾರದ ಯಾವ ಅನುದಾನದಲ್ಲಿ ನಿರ್ಮಾಣ ಮಾಡಿದ್ದಾರೆ ಎಂದು ಅಲ್ಲಿರುವ ಸದಸ್ಯರಿಗೆ ಗೊತ್ತಿಲ್ಲ. ಅಲ್ಲಿ ಯಾವುದೇ ಮಾಹಿತಿ ಕೂಡ ಇಲ್ಲ, ಸರ್ಕಾರದ ವತಿಯಿಂದ ಇವರು ವಾಸಿಸುವ ರಸ್ತೆಗೆ ಕಾಂಕ್ರಿಟ್ ಮಾಡಲಾಗಿದೆ, ಬೀದಿ ದೀಪ ಅಳವಡಿಸಲಾಗಿದೆ, ತೆರೆದಬಾವಿ ಇದೆ ಆದರೆ ಅದಕ್ಕೆ ಸರಿಯಾದ ರಕ್ಷಣೆ ಇಲ್ಲ, ಇಲ್ಲಿನ ಕುಟುಂಬದ ಸದಸ್ಯರು ಸಂಪೂರ್ಣವಾಗಿ ಸರ್ಕಾರದ ವತಿಯಿಂದ ಸಿಗುವ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.
ಹೋರಾಟದ ಮೂಲಕ ನಮ್ಮ ಮೂಲಭೂತ ಸೌಕರ್ಯಗಳನ್ನು ಪಡೆಯಬೇಕು, ಅದುದರಿಂದ ಇಲ್ಲಿ ನೂತನ ಘಟಕ ಆರಂಭಿಸಿದ್ದೇವೆ. ಎಲ್ಲಾ ಸದಸ್ಯರನ್ನು ಒಟ್ಟುಗೂಡಿಸಿ ಸಭೆಯೊಂದು ಮಾಡಿ ನಂತರ ಎಲ್ಲಾ ಕುಟುಂಬದ ಸದಸ್ಯರು ಒಟ್ಟು ಸೇರಿ ಇಂದು ದಲಿತ ಸಂಘರ್ಷ ಸಮಿತಿಯ ನೂತನ ಘಟಕ ಪ್ರಾರಂಭಿಸಿದ್ದೇವೆ ಎಂದರು.
ವೇದಿಕೆಯಲ್ಲಿ ಗ್ರಾ.ಪಂ ಮಾಜಿ ಸದಸ್ಯರಾದ ಪ್ರೇಮ, ತಾಲೂಕು ಘಟಕದ ಅಧ್ಯಕ್ಷರಾದ ಸುರೇಶ್, ಮಹಿಳಾ ಘಟಕದ ಅದ್ಯಕ್ಷೆ ಮಂಜುಳಾ, ಮುಖಂಡರಾದ ಸುರೇಶ್ ಎಚ್.ಎಸ್ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಸ್ಥಳೀಯರಾದ ಸ್ವಾತಿ, ರತಿ, ತಿಮ್ಮಯ್ಯ, ಕಾವ್ಯ, ಚುಬ್ನಕ್ಕಿ, ಕೇಶವ, ಕೊಮಲ, ಪೂಜ, ಸಬಿತ, ಶಾರದಾ, ಸರಿತ, ಡೀನಾ ರುಕ್ಮಿಣಿ, ಸೇರಿದಂತೆ ಇತರರು ಹಾಜರಿದ್ದರು.









