ಮಡಿಕೇರಿ ಡಿ.28 : ನಾವೀನ್ಯತೆ ಕ್ಷೇತ್ರ-2 ಮತ್ತು ತಾರ್ಕಿಕ ಸಾಧನೆಗಳು-2 ಈ ವಿಭಾಗದಲ್ಲಿ ತಲಾ 2 ರಂತೆ ಒಟ್ಟು 4 ಪ್ರಶಸ್ತಿ ನೀಡಲಾಗುತ್ತಿದ್ದು, ಅಸಾಧಾರಣ ಸಾಧನೆ ಮಾಡಿ ಪ್ರತಿಭೆ ತೋರಿರುವ 5 ರಿಂದ 18 ವರ್ಷದೊಳಗಿನ (ಜುಲೈ 31 ಕ್ಕೆ) ಮಕ್ಕಳನ್ನು 2023-24 ನೇ ಸಾಲಿಗೆ ಜಿಲ್ಲಾ ಮಟ್ಟದ ಪ್ರತಿಭಾಪುರಸ್ಕಾರ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗುವುದು. ಈ ಜಿಲ್ಲಾ ಮಟ್ಟದ ಪ್ರಶಸ್ತಿಯು ಪ್ರಶಸ್ತಿಪತ್ರ ಹಾಗೂ ರೂ.10 ಸಾವಿರ ನಗದು ಬಹುಮಾನ ಒಳಗೊಂಡಿದೆ.
ಈ ಪ್ರಶಸ್ತಿಗೆ ಆಯ್ಕೆಯಾಗುವಂತಹ ಮಕ್ಕಳು ಅಪ್ರತಿಮ ಪ್ರತಿಭೆಯುಳ್ಳವರಾಗಿದ್ದು, ಈ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಯನ್ನು ಅಸಾಧಾರಣವೆಂದು ಗುರುತಿಸಲು ಅವರ ಸಾಧನೆಯ ಬಗ್ಗೆ ದಿನಪತ್ರಿಕೆಗಳಲ್ಲಿ ವರದಿಯಾಗಿರಬೇಕು ಅಥವಾ ಸಂಬಂಧಪಟ್ಟ ಕ್ಷೇತ್ರದ ತಜ್ಞರಿಂದ ಪರೀಕ್ಷಿಸಿರಬೇಕು. ಮಕ್ಕಳ ವಯಸ್ಸಿನ ಪ್ರಮಾಣ ಪತ್ರವನ್ನು ಪತ್ರಾಂಕಿತ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು. ಈ ಹಿಂದೆ ಯಾವುದಾದರೂ ವರ್ಷದಲ್ಲಿ ಅರ್ಜಿ ಪ್ರಶಸ್ತಿಗೆ ಪರಿಗಣಿಸಲ್ಪಟ್ಟಿದ್ದಲ್ಲಿ, ಪುನಃ ಅದನ್ನು ಪರಿಗಣಿಸಲಾಗುವುದಿಲ್ಲ.
2023-24 ನೇ ಸಾಲಿನ ಪ್ರಶಸ್ತಿಗೆ ನಿಗದಿಪಡಿಸಿದ ಅರ್ಜಿ ನಮೂನೆಗಳನ್ನು ಉಪ ನಿರ್ದೇಶಕರ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಡಗು ಜಿಲ್ಲೆ ಇಲ್ಲಿಂದ ಪಡೆದು ದ್ವಿಪ್ರತಿಯಲ್ಲಿ ಭರ್ತಿ ಮಾಡಿದ ಅರ್ಜಿಗಳೊಂದಿಗೆ ಸಂಬಂಧಪಟ್ಟ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪ್ರಸ್ತಾವನೆಯನ್ನು ಜನವರಿ, 8 ರೊಳಗೆ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್ಗೇಟ್, ಮೈಸೂರು ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ ಈ ಕಚೇರಿಗೆ ಸಲ್ಲಿಸಬೇಕು. ನಿಗದಿತ ದಿನಾಂಕದ ನಂತರ ಸಲ್ಲಿಸಿದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ
(ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ : 9482194105, 9535626053) ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಟರಾಜು ತಿಳಿಸಿದ್ದಾರೆ.