ನಾಪೋಕ್ಲು ಜ.2 : ಸಂಘಟನೆಯನ್ನು ಆರಂಭಿಸುವುದು ಸುಲಭ ಅದನ್ನು ಯಶಸ್ವಿ ಸಂಘಟನೆಯಾಗಿ ಮಾರ್ಪಡಿಸಲು ಕಾರ್ಯಕರ್ತರು ಸಾಕಷ್ಟು ಶ್ರಮವಹಿಸಬೇಕು ಎಂದು ಮಡಿಕೇರಿ ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ಎಸ್ ರಮೇಶ್ ಹೇಳಿದರು.
ನಾಪೋಕ್ಲುವಿನ ಪೊನ್ನಮ್ಮ ಕಾವೇರಪ್ಪ ಕಾಂಪ್ಲೆಕ್ಸ್ ನಲ್ಲಿ ನಡೆದ ಹಿಂದೂ ಮಲಯಾಳಿ ಸಂಘದ ಕಚೇರಿ ಉದ್ಘಾಟನಾ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಉತ್ತಮ ಸದಸ್ಯರಿಂದ ಸಂಘಟನೆ ಬಲವರ್ಧನೆಗೊಳ್ಳುತ್ತದೆ. ಸಂಘಟನೆ ಆರಂಭಿಸುವಾಗ ಇರುವ ಆಸಕ್ತಿ ಚಿರಕಾಲ ಉಳಿಯಬೇಕು. ತಿಂಗಳಿಗೊಮ್ಮೆ ಸಭೆ ನಡೆಸುವುದರ ಮೂಲಕ ಆಗು ಹೋಗುಗಳನ್ನು ಚರ್ಚಿಸಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು. ಪ್ರತಿ ಸಭೆಯಲ್ಲಿ ಸದಸ್ಯರು ಪಾಲ್ಗೊಂಡು ಒಮ್ಮತದ ಅಭಿಪ್ರಾಯವನ್ನು ಹೊಂದಿ ತೀರ್ಮಾನ ಕೈಗೊಂಡಾಗ ಯಶಸ್ಸಿಗೆ ಸಹಕಾರಿಯಾಗುತ್ತದೆ ಎಂದರು.
ಗ್ರಾ.ಪಂ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಸಂಘದ ಕಚೇರಿ ಉದ್ಘಾಟಿಸಿ ಮಾತನಾಡಿ, ಸಂಘದಿಂದ ಸದಸ್ಯರಿಗೆ ಉಪಯೋಗವಾಗಲಿ. ಸಂಘದ ಕಾರ್ಯಕ್ರಮಗಳನ್ನು ಸದಸ್ಯರು ಸದುಪಯೋಗಪಡಿಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಜವಾಬ್ದಾರಿ ಸಂಘವನ್ನು ನಿರ್ಮಿಸಿ ಕೊಡಬೇಕು ಎಂದು ಸಲಹೆ ನೀಡಿದರು.
ಕಾಫಿ ಬೆಳೆಗಾರ ಅಪ್ಪಚೆಟ್ಟೋಳಂಡ ನವೀನ್ ಅಪ್ಪಯ್ಯ ಮಾತನಾಡಿ, ಸಂಘದ ನಾಪೋಕ್ಲು ಶಾಖೆಯು ಆರ್ಥಿಕವಾಗಿ ಸದೃಢವಾಗಲು ಬ್ಯಾಂಕಿಂಗ್ ವ್ಯವಸ್ಥೆಯನ್ನು ಕೈಗೊಳ್ಳುವಂತಾಗಬೇಕು ಎಂದರು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಅತಿಥಿಗಳು ನೆರವೇರಿಸಿದರು. ಇದಕ್ಕೂ ಮುನ್ನ ಹಿಂದೂ ಮಲಯಾಳಿ ಸಂಘದ ಕಚೇರಿಯನ್ನು ಉದ್ಘಾಟಿಸಲಾಯಿತು.
ಹಿಂದೂ ಮಲಯಾಳಿ ಸಂಘದ ನೂತನ ಅಧ್ಯಕ್ಷ ಕೆ.ಕೆ.ಅನಿಲ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ಓಣಂ ಆಚರಣೆ ಸಮಿತಿಯ ಅಧ್ಯಕ್ಷ ಟಿ.ಆರ್ ವಾಸುದೇವ್, ಪೊನ್ನು ಮುತ್ತಪ್ಪ ದೇವಾಲಯದ ಅಧ್ಯಕ್ಷ ಎ.ಕೆ.ಚಂದ್ರನ್, ಕಾರ್ಯದರ್ಶಿ ಟಿ.ಸಿ.ರಾಜೀವ್, ಹಿಂದು ಮಲಯಾಳಿ ಸಂಘದ ಉಪಾಧ್ಯಕ್ಷರಾದ ಬಿ.ಎನ್.ಹರಿದಾಸ್, ಅಭಿಲಾಶ್, ಪ್ರಧಾನ ಕಾರ್ಯದರ್ಶಿ ಎಮ್.ಆರ್.ಅಜಿತ್, ಸಂಘಟನಾ ಕಾರ್ಯದರ್ಶಿ ಪಿ.ಸಿ.ಕಿಶೋರ್, ಹಿಂದೂ ಮಲಯಾಳಿ ಮಹಿಳಾ ಸಂಘದ ಉಪಾಧ್ಯಕ್ಷೆ ಅಂಬಿಕಾ ಪ್ರಸಾದ್ ಹಾಜರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವರದಿ : ದುಗ್ಗಳ ಸದಾನಂದ