ಸೋಮವಾರಪೇಟೆ ಜ.2 : ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆ ಹಾಗೂ ಸುಂಟಿಕೊಪ್ಪ ಕೊಡಗರಹಳ್ಳಿ ಶಾಲೆಗೆ ಒಕ್ಕಲಿಗರ ಸಂಘದ ನಿರ್ದೇಶಕ, ದಾನಿ ಹರಪಳ್ಳಿ ರವೀಂದ್ರ ಆರ್ಥಿಕ ಸಹಾಯ ನೀಡಿದರು.
ಶಾಂತಳ್ಳಿ ಕುಮಾರಲಿಂಗೇಶ್ವರ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಪೋಷಕರ ಸಭೆಯಲ್ಲಿ ಒಟ್ಟು 30 ಲಕ್ಷ ಮೌಲ್ಯದ ಚೆಕ್‍ನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಕೆ.ಗೋಪಾಲ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ಕೊಡಗರಹಳ್ಳಿ ಶಾಲೆಯನ್ನೂ ಅಭಿವೃದ್ಧಿಗೊಳಿಸುವ ಚಿಂತನೆಯಿದ್ದು, ಆ ಶಾಲೆಗೆ 3 ಲಕ್ಷ ಅನುದಾನ ನೀಡುವ ಬಗ್ಗೆ ಕ್ರಮ ವಹಿಸುವುದಾಗಿ ಹರಪಳ್ಳಿ ರವೀಂದ್ರ ಹೇಳಿದರು.
ಮಾತೃಭಾಷೆಯಾಗಿರುವ ಕನ್ನಡವನ್ನು ದೈನಂದಿನ ಜೀವನದಲ್ಲಿ ಬಳಸಲೇಬೇಕಿದೆ. ಆದರೆ ವ್ಯಾವಹಾರಿಕವಾಗಿ ಆಂಗ್ಲ ಭಾಷೆಯ ಅನಿವಾರ್ಯವಿದೆ. ಸ್ಪರ್ಧಾತ್ಮಕ ಮತ್ತು ತಂತ್ರಜ್ಞಾನದ ಯುಗದಲ್ಲಿ ಬದುಕು ಕಟ್ಟಿಕೊಳ್ಳಲು ಇಂಗ್ಲೀಷ್‍ನ ಅಗತ್ಯತೆ ಹೆಚ್ಚಿದ್ದು, ಈ ನಿಟ್ಟಿನಲ್ಲಿ ಶಾಂತಳ್ಳಿಯಂತಹ ಗ್ರಾಮೀಣ ಭಾಗದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಲಾಗಿದೆ ಎಂದರು.
ಶ್ರೀ ಕುಮಾರಲಿಂಗೇಶ್ವರ ಶಾಲೆಯಲ್ಲಿ ಹೆಚ್ಚುವರಿಯಾಗಿ 4 ಕೊಠಡಿ, ಕಂಪ್ಯೂಟರ್ ಶಿಕ್ಷಣ, ಸ್ಮಾರ್ಟ್ ಕ್ಲಾಸ್, ಯೋಗ, ಸಂಗೀತ, ಕರಾಟೆ, ಭರತನಾಟ್ಯ ಸೇರಿದಂತೆ ಇನ್ನಿತರ ರಚನಾತ್ಮಕ ಶಿಕ್ಷಣವನ್ನು ನೀಡಲಾಗುತ್ತಿದೆ. ಗ್ರಾಮೀಣ ಭಾಗದ ಶಾಲೆಯಲ್ಲಿ ಇದೇ ಮೊದಲ ಬಾರಿಗೆ ಸ್ಮಾರ್ಟ್ ಕ್ಲಾಸ್ ಅಳವಡಿಸಲಾಗುತ್ತಿದೆ. ಮಕ್ಕಳಿಗೆ ಮಹಾಭಾರತ ಮತ್ತು ಭಗವದ್ಗೀತೆಗಳ ಬಗ್ಗೆಯೂ ಜ್ಞಾನ ನೀಡಲು ಕಾರ್ಯಕ್ರಮಗಳನ್ನು ಆಯೋಜಿಸುವ ಚಿಂತನೆಯಿದೆ ಎಂದು ಹರಪಳ್ಳಿ ರವೀಂದ್ರ ತಿಳಿಸಿದರು.
ಶಾಂತಳ್ಳಿಯಂತಹ ಗ್ರಾಮೀಣ ಭಾಗದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದು, ಮುಂದಿನ ದಿನಗಳಲ್ಲಿ ವಸತಿ ಶಾಲೆಯನ್ನು ತೆರೆಯಲಾಗುವುದು. ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಆಗಾಗ್ಗೆ ಶಾಲೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಕೆ.ಗೋಪಾಲ್ ಮಾತನಾಡಿ, ಶಾಲೆಯ ಅಭಿವೃದ್ಧಿಗೆ ಹಲವು ದಾನಿಗಳು ಕೈಜೋಡಿಸಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಏಕೈಕ ಉದ್ದೇಶ ಹೊಂದಲಾಗಿದೆ. ರವೀಂದ್ರ ಅವರು ಶಾಲೆಗೆ ಈಗಾಗಲೇ 60 ಲಕ್ಷಕ್ಕೂ ಅಧಿಕ ಹಣ ನೀಡುವ ಮೂಲಕ ಮಕ್ಕಳ ಕಲಿಕೆಗೆ ಅಡಿಪಾಯ ಹಾಕಿದ್ದಾರೆ ಎಂದು ಶ್ಲಾಘಿಸಿದರು.
ಶಾಲಾಭಿವೃದ್ಧಿ ಸಮಿತಿ ನಿರ್ದೇಶಕ ಹಾಗೂ ದಾನಿ ಅರುಣ್ ಕೊತ್ನಳ್ಳಿ ಮಾತನಾಡಿ, ಗ್ರಾಮೀಣ ಭಾಗದ ಶಾಲೆಗಳನ್ನು ಉಳಿಸಿಕೊಳ್ಳಬೇಕಿದೆ. ಉತ್ತಮ ಪರಿಸರದ ನಡುವೆ ಶಿಕ್ಷಣ ಪಡೆಯುವ ಮಕ್ಕಳು ಭವಿಷ್ಯದಲ್ಲಿ ಸಾಧನೆಯ ಮೆಟ್ಟಿಲು ಏರುತ್ತಾರೆ. ಈ ನಿಟ್ಟಿನಲ್ಲಿ ಶಾಲೆಯ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಸ್ಮಾರ್ಟ್ ಕ್ಲಾಸ್‍ಗೆ ಅಗತ್ಯವಾಗಿರುವ ಇನ್‍ವರ್ಟರ್‍ಗಳನ್ನು ಕೊಡುಗೆಯಾಗಿ ನೀಡುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ಸಮಿತಿ ಕಾರ್ಯದರ್ಶಿ ಕಾರ್ಯಪ್ಪ, ನಿರ್ದೇಶಕ ವೆಂಕಟೇಶ್, ಚಂಗಪ್ಪ, ಮುತ್ತಣ್ಣ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಉಷಾಕುಮಾರಿ, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಲೀಲಾವತಿ ಉಪಸ್ಥಿತರಿದ್ದರು. ಪ್ರಥಮ್ ಸ್ವಾಗತಿಸಿ, ಶಿಕ್ಷಕರಾದ ಭವ್ಯ, ರತ್ನ ಕಾರ್ಯಕ್ರಮ ನಿರ್ವಹಿಸಿದರು.