ನಾಪೋಕ್ಲು ಜ.2 : ಮೈಸೂರಿನ ಹೂಟಗಳ್ಳಿ ಕೊಡಗು ಗೌಡ ಕ್ಷೇಮಾಭಿವೃದ್ಧಿ ಸಂಘದ ವಾರ್ಷಿಕೋತ್ಸವದ ಅಂಗವಾಗಿ ಕ್ರೀಡಾ ಹಾಗೂ ಸೌಹಾರ್ದ ಕೂಟ ಕಾರ್ಯಕ್ರಮ ಮೈಸೂರು ಗೌಡ ಸಮಾಜದ ಸಭಾಂಗಣದಲ್ಲಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಪೊನ್ನಚನ ಅಪ್ಪಯ್ಯ, ಸಂಘದ ಸದಸ್ಯರುಗಳ ಸಂಖ್ಯೆ ಗಣನೀಯ ಏರಿಕೆಯು ಸಂಘದ ಅಭಿವೃದ್ಧಿ ಹಾಗೂ ಬೆಳವಣಿಗೆಯನ್ನು ಸೂಚಿಸುತ್ತದೆ. ಸಂಘದ ಮೂಲ ಹಾಗೂ ಮುಖ್ಯ ಉದ್ದೇಶವನ್ನು ಗುರಿಯಾಗಿಟ್ಟುಕೊಂಡು ಒಗ್ಗಟ್ಟಿನಿಂದ ಶ್ರಮಿಸಬೇಕಿದೆ ಎಂದರು.
ಸಂಘವು ತನ್ನದೇ ಆದ ನಿವೇಶನ ಹೊಂದುವ ಮೂಲಕ ತಮ್ಮದೇ ಆದ ಸ್ವಂತ ಕಟ್ಟಡವನ್ನು ಹೊಂದಬೇಕೆಎನ್ನುವ ಇಂಗಿತವನ್ನು ವ್ಯಕ್ತಪಡಿಸಿದರು. ಇದಕ್ಕಾಗಿ ಸರ್ವರ ಸಹಕಾರವನ್ನು ಕೋರಿ ಸರ್ವರ ಸಹಮತವನ್ನು ಪಡೆದುಕೊಂಡರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೈಸೂರು ವಿದ್ಯಾ ವಿಕಾಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕವಿಶ್ ಗೌಡ ಮಾತನಾಡಿ, ಕೊಡಗಿನ ಅರೆಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಭಾಗದಲ್ಲಿ ನೆಲೆಸಿದ್ದು, ಎಲ್ಲರೂ ಒಂದಾಗಿ ಸೇರಿ ನಡೆಸುತ್ತಿರುವ ಕಾರ್ಯ ಚಟುವಟಿಕೆಗಳು ಇತರರಿಗೂ ಮಾದರಿಯಾಗಿದೆ ಎಂದು ಶ್ಲಾಘಿಸಿದರು.
ಪ್ರತಿಭಾವಂತರನ್ನು ಗುರುತಿಸಿ ಪುರಸ್ಕರಿಸುವುದು ವಿಶೇಷ ಸಾಧಕರನ್ನು ಸನ್ಮಾನಿಸಿ ಅಭಿನಂದಿಸುವುದು. ಹಿರಿಯ ನಾಗರಿಕರನ್ನು ಸನ್ಮಾನಿಸಿ ಗೌರವಿಸುವುದು. ಬಹಳ ಹೆಮ್ಮೆಯ ವಿಚಾರ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಂದೆಯೂ ಇಂತಹ ಅನೇಕ ಕಾರ್ಯಕ್ರಮಗಳು ಸಂಘದ ವತಿಯಿಂದ ಮೂಡಿಬರಲಿ ಎಂದು ಆಶಿಸಿದರು.
ಡಾ.ನೆರಿಯನ ಪ್ರವೀಣ್ ಮಾತನಾಡಿ, ಅರೆಭಾಷೆ ಸಂಸ್ಕೃತಿಯ ಬಗ್ಗೆ, ಸಂಪ್ರದಾಯದ ಬಗ್ಗೆ , ಜೀವನ ಶೈಲಿಯ ಬಗೆಗಿನ ವಿಚಾರಗಳನ್ನು ತುಂಬಾ ಸೊಗಸಾಗಿ ವರ್ಣನೆ ಮಾಡಿ ಹೇಳಿದರು.
ಮಳೆಗಾಲ, ಚಳಿಗಾಲ ಮತ್ತು ಬೇಸಿಗೆಯ ಕೊಡಗಿನ ಜೀವನ ಶೈಲಿಯನ್ನು ಮನಮುಟ್ಟುವಂತೆ ಸವಿಸ್ತಾರವಾಗಿ ವರ್ಣಿಸಿದರು.
ಡಾ. ನೆರಿಯನ ಪ್ರವೀಣ್ ಅವರು ಅರೆಭಾಷೆ ಗೌಡರ ಹೆಮ್ಮೆಯ ಸಂಪ್ರದಾಯಿಕ ಉಡುಗೆ ತೊಟ್ಟು ಗಮನ ಸೆಳೆದರು.
ಇದೇ ಸಂದರ್ಭ ಸ್ನಾತಕೋತ್ತರ ಪಶು ವೈದ್ಯಕೀಯ ವಿಜ್ಞಾನ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಮೇರ್ಕಜೆ ನಿಷ್ಮಾನಾಣಯ್ಯ ಹಾಗೂ ನೇಪಾಳದಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಆಮೆ ನವ್ಯಶ್ರೀ ಡಿಲಿತ್, ಸಂಘದ ನಿಕಟ ಪೂರ್ವ ಅಧ್ಯಕ್ಷ ನಡು ಮನೆ ಚಂಗ ಪ್ಪ ಹಿರಿಯರಾದ ಕೇಟೋಳಿರ ಪೊನ್ನಪ್ಪ, ಪಟ್ಟಡ ಸುಶೀಲಮ್ಮ ಬೆಳ್ಳಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
2022 /23 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಗುತ್ತಿ ಮುಂಡನ ವಿಸ್ಮಿತ ಚಂದ್ರಶೇಖರ್, ಕರೆ ಮನೆ ದ್ರುಪದ್ ರೇಣು ಕುಮಾರ್, ಕಾಳೆಯಂಡ ಜಾಗೃತಿ ಅಶೋಕ್, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅತ್ಯಧಿಕ ಅಂಕಗಳಿಸಿದ ಹೊಸೋಕ್ಲು ಧೃತಿ ಅಪ್ಪಯ್ಯ, ಪೂಜಾರಿರ ಡಿಂಪಲ್ ಕುಮೋದರ್, ಪೊನ್ನಚನ ತ್ರಿನೇಶ್ ಅಪ್ಪಯ್ಯ, ವಾಣಿಜ್ಯ ವಿಭಾಗದಲ್ಲಿ ಮುಕ್ಕಾಟಿ ವಂಶಿ ತಿಲಕಾನಂದ ಸಿಬಿಎಸ್ಸಿ ವಿಭಾಗದಲ್ಲಿ ಮೂವನ ಲಿಖಿನ್ ಬಾಲಕೃಷ್ಣ ಇವರನ್ನು ಪುರಸ್ಕರಿಸಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಗ್ರಾಮೀಣ ಕ್ರೀಡಾಕೂಟಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು..
ಈ ಸಂದರ್ಭ ಕೊಡಗು ಗೌಡ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷರಾದ ಕುಯ್ಯಮುಡಿ ಗೀತಾ, ಗೌರವ ಕಾರ್ಯದರ್ಶಿ ಬೋಳನ ಜಯಪ್ರಸಾದ್, ಸಹ ಕಾರ್ಯದರ್ಶಿ ಚೆರುಕನ ಲವ, ಗೌರವ ಕೋಶಾಧಿಕಾರಿ ಚಿಕ್ಕೋಡಿ ರಮೇಶ್, ನಿರ್ದೇಶಕರಾದ ಉದಿಯನ ಸುರೇಶ್, ಚೆರುಕನ ಕುಶ, ಮೂವನ ನವೀನ್, ಮೂವನ ರಾಜೇಂದ್ರ, ನೆಕ್ಕಿಲ ಮಾಧವ, ಚೀಯಪ್ಪನ ರಾಜೇಶ್, ಕರ್ಣಯನ ನೀಲಾಕ್ಷಿ ಮೋಹನ್, ಹೊಸೊಕ್ಲು ಅಪ್ಪಯ್ಯ ಸೇರಿದಂತೆ ಗಣ್ಯರು,ಜನಾಂಗ ಬಾಂಧವರು, ಭಾಷಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸಂಘದ ನಿರ್ದೇಶಕರುಗಳಾದ ಕುಯ್ಯಮುಡಿ ಗೀತಾ ಮತ್ತು ಕರ್ಣಯನ ನೀಲಾಕ್ಷಿ ಮೋಹನ್ ಪ್ರಾರ್ಥಿಸಿದರು. ಕಾರ್ಯದರ್ಶಿ ಬೋಳನ ಜಯಪ್ರಸಾದ್ ಸ್ವಾಗತಿಸಿದರು. ಉಪನ್ಯಾಸಕ ಪಟ್ಟಡ ಶಿವಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿರು. ನಿಕಟಪೂರ್ವ ಕಾರ್ಯದರ್ಶಿ ಮುಕ್ಕಾಟಿ ಅರುಣ ಕುಮಾರ್ ಸರ್ವರಿಗೂ ವಂದಿಸಿದರು.
ವರದಿ : ದುಗ್ಗಳ ಸದಾನಂದ