ಮಡಿಕೇರಿ ಜ.9 : ಮೂಲಭೂತ ಸೌಲಭ್ಯ ಮತ್ತು ಶಿಕ್ಷಕರ ಕೊರತೆಯಿಂದ ಕೊಡಗು ಜಿಲ್ಲೆಯ ವಿವಿಧ ಭಾಗಗಳ ಸರ್ಕಾರಿ ಶಾಲೆಗಳು ಮುಚ್ಚುವ ಹಂತದಲ್ಲಿವೆ. ಸರ್ಕಾರಿ ಆಸ್ಪತ್ರೆಗಳು ರೋಗಿಗಳಿಗೆ ಸೂಕ್ತ ಆರೋಗ್ಯ ಸೇವೆ ನೀಡುವಲ್ಲಿ ವಿಫಲವಾಗುತ್ತಿವೆ ಎಂದು ಆರೋಪಿಸಿರುವ ಆಮ್ ಆದ್ಮಿ ಪಾರ್ಟಿಯ ಕೊಡಗು ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ಅವರು, ಹೋರಾಟದ ಎಚ್ಚರಿಕೆ ನೀಡಿದ್ದಾರೆ.
“ಆಮ್ ಆದ್ಮಿ ಪಾರ್ಟಿಯ ನಡೆ ಹಳ್ಳಿಯ ಕಡೆ” ಕಾರ್ಯಕ್ರಮದ ಭಾಗವಾಗಿ ಸೋಮವಾರಪೇಟೆ ತಾಲ್ಲೂಕಿನ ಹಲವು ಗ್ರಾಮಗಳಿಗೆ ಭೇಟಿ ನೀಡಿ ಸಮಸ್ಯೆಗಳ ಕುರಿತು ಮಾಹಿತಿ ಸಂಗ್ರಹಿಸಿದ ಅವರು ಶಿಕ್ಷಕರು ಹಾಗೂ ವೈದ್ಯರ ಕೊರತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಗರ್ವಾಲೆ ಪ್ರಾಥಮಿಕ ಶಾಲೆ 4-5 ವರ್ಷಗಳ ಹಿಂದೆಯೇ ಮುಚ್ಚಲ್ಪಟ್ಟಿದ್ದು, ಆಶ್ಚರ್ಯಕ್ಕೆ ಕಾರಣವಾಗಿದೆ. ಕುಂದಳ್ಳಿ, ಬಾಚಹಳ್ಳಿ, ಕೊತ್ನಳ್ಳಿ, ಕೂತಿ, ಹರಗ ಮತ್ತು ಅಬ್ಬಿಮಠ ಸರ್ಕಾರಿ ಶಾಲೆಗಳು ಮುಚ್ಚಿವೆ. ಉಳಿದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಬಹಳ ಕಡಿಮೆ ಇದೆ, ಹಾಗೆಯೇ ಶಿಕ್ಷಕರ ಕೊರತೆಯೂ ಕಾಡಿದೆ. ಶಾಲೆ ಯಾವಾಗ ಬೇಕಾದರೂ ಮುಚ್ಚುವ ಹಂತದಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾದಾಪುರ, ಶಾಂತಾಳ್ಳಿ ಸಮುದಾಯ ಆಸ್ಪತ್ರೆಯಲ್ಲಿ ಮಂಜೂರಾಗಿರುವ ಸಂಖ್ಯೆಗಿಂತ ವೈದ್ಯರು ಹಾಗೂ ನರ್ಸ್ಗಳ ಸಂಖ್ಯೆ ಬಹಳ ಕಡಿಮೆ ಇದೆ. ಈ ಭಾಗದಲ್ಲಿರುವ ಆರೋಗ್ಯ ಉಪ ಕೇಂದ್ರಗಳು ವೈದ್ಯರು ಹಾಗೂ ನರ್ಸ್ಗಳಿಲ್ಲದೆ ಬಾಗಿಲು ಹಾಕಿದೆ. ಇದರಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಫಾರ್ಮಸಿ ಹುದ್ದೆಗಳು ಕೂಡ ಖಾಲಿ ಇವೆ, ಲ್ಯಾಬ್ ಗಳಲ್ಲಿ ಉಪಕರಣಗಳಿದ್ದರೂ ಟೆಕ್ನೀಷಿಯನ್ ಗಳ ಕೊರತೆ ಇದೆ. ಒಟ್ಟಿನಲ್ಲಿ ಆರೋಗ್ಯ ಸೇವೆ ಸಂಪೂರ್ಣವಾಗಿ ಹಿಂದುಳಿದಿದೆ.
ಮಾದಾಪುರ, ಶಿರಂಗಳ್ಳಿ, ಗರ್ವಾಲೆ ಭಾಗಕ್ಕೆ ಒಂದೇ ಒಂದು ಸರ್ಕಾರಿ ಬಸ್ಸು ಇದ್ದು ಗ್ರಾಮಸ್ಥರ ಸಂಚಾರಕ್ಕೆ ಅನಾನುಕೂಲವಾಗಿದೆ. ಖಾಸಗಿ ಬಸ್ಸುಗಳ ವ್ಯವಸ್ಥೆ ಕೂಡ ಇಲ್ಲದೆ ಇರುವುದರಿಂದ ಜೀಪು, ಆಟೋಗಳಿಗೆ ದುಬಾರಿ ಹಣ ನೀಡಿ ಹೋಗಬೇಕಾದ ಅನಿವಾರ್ಯತೆ ಇದೆ. ಇಲ್ಲಿರುವ ಬಿಎಸ್‌ಎನ್‌ಎಲ್ ಟವರ್ ಸರಿಯಾಗಿ ಕಾರ್ಯನಿರ್ವಹಿಸದೆ ಇರುವುದರಿಂದ ನೆಟ್‌ವರ್ಕ್ ಸಮಸ್ಯೆ ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ಗ್ರಾಮಸ್ಥರನ್ನು ಕಾಡಿದೆ ಎಂದು ಭೋಜಣ್ಣ ಸೋಮಯ್ಯ ಆರೋಪಿಸಿದರು.
ಈ ಅವ್ಯವಸ್ಥೆಗಳ ವಿರುದ್ಧ ಮುಂದಿನ ದಿನಗಳಲ್ಲಿ ಆಮ್ ಆದ್ಮಿ ಪಾರ್ಟಿ ಜನರ ಸಹಕಾರದೊಂದಿಗೆ ಹೋರಾಟವನ್ನು ರೂಪಿಸಲಿದೆ ಎಂದರು.
ಪಕ್ಷದ ಪ್ರಮುಖರು ಹರದೂರು, ಸೂರ್ಲಬಿ, ಬೆಟ್ಟದ ಹಳ್ಳಿ, ಶಾಂತಳ್ಳಿ, ಕೂತಿ, ಕೊಡ್ಲಿಪೇಟೆ, ಗೋಪಾಲಪುರ, ಆಲೂರು ಸಿದ್ದಾಪುರ ಮತ್ತು ಬ್ಯಾಡಗೊಟ್ಟ ಗ್ರಾಮಗಳಿಗೆ ಕೂಡ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದರು.











