ಮಡಿಕೇರಿ ಜ.10 : ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲಿ ಶುಂಠಿ ಬೆಳೆಗಾಗಿ ಅರಣ್ಯ ಇಲಾಖೆಯ ಪೂರ್ವಾ ಅನುಮತಿ ಪಡೆಯದೆ ಮರಗಳನ್ನು ಹನನ ಮಾಡುತ್ತಿರುವುದು ಇಲಾಖಾ ಗಮನಕ್ಕೆ ಬಂದಿದ್ದು, ಈ ಕೃತ್ಯ ಎಸಗುತ್ತಿರುವವರ ಮೇಲೆ ಅರಣ್ಯ ಮೊಕದ್ದಮೆ ದಾಖಲಾಗುತ್ತಿರುತ್ತದೆ. ಯಾವುದೇ ಉದ್ದೇಶಕ್ಕಾದರು ಸರಿ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖಾ ಅನುಮತಿ ಕಡ್ಡಾಯವಾಗಿರುತ್ತದೆ
ಕಾನೂನಾತ್ಮಕವಾಗಿ ಅನುಮತಿ ಪಡೆಯದೆ ಮರಗಳನ್ನು ತೆರವುಗೊಳಿಸಿದ್ದಲ್ಲಿ ಜಾಗದ ಮಾಲೀಕರು ಮತ್ತು ಜಾಗವನ್ನು ಗುತ್ತಿಗೆ ಪಡೆದವರು ಹಾಗೂ ಕೃತ್ಯವನ್ನು ಎಸಗಿದವರ ಮೇಲೆ ಅರಣ್ಯ ಮೊಕದ್ದಮೆ ದಾಖಲಾಗಿರುತ್ತದೆ. ಹಾಗೂ ಆರೋಪಿತರು ನ್ಯಾಯಾಂಗ ಬಂಧನಕ್ಕೆ ಒಳಪಡಬೇಕಾಗಿರುತ್ತದೆ.
ಕೃತ್ಯಕ್ಕೆ ಬಳಸಿದ ವಾಹನ ಮತ್ತು ಯಂತ್ರೋಪಕರಣಗಳನ್ನು ಇಲಾಖಾ ಪರ ಅಮಾನತ್ತು ಪಡಿಸಿಕೊಳ್ಳಲಾಗುತ್ತದೆ ಮತ್ತು ಆರೋಪಿತರು ಮರಗಳ ಮೌಲ್ಯ ಹಾಗೂ ಪರಿಸರ ನಾಶಮಾಡಿದ್ದಕ್ಕೆ ದಂಡ ತೆರಬೇಕಾಗಿರುತ್ತದೆ. ತಪ್ಪಿದ್ದಲ್ಲಿ ಆರೋಪಿತರ ಮೇಲೆ ದೋಷರೋಪಣಾ ಪಟ್ಟಿಯನ್ನು ತಯಾರಿಸಿ ಘನ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ಉದ್ದೇಶಕ್ಕೆ ಮರ ತೆರವುಗೊಳಿಸಲು ಅರಣ್ಯ ಇಲಾಖೆಯ ಪೂರ್ವಾನುಮತಿ ಪಡೆಯಲು ತಿಳಿಸಿದೆ.
ಪರಿಸರ ಸಂರಕ್ಷಣೆ ಮಾಡುವಲ್ಲಿ ಇಲಾಖೆಯೊಂದಿಗೆ ಕೈಜೋಡಿಸುವಂತೆ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.