ಸಿದ್ದಾಪುರ ಜ.10 : ವಿಕಲಚೇತನರ ಪಂಜಕುಸ್ತಿ ರಾಜ್ಯ ಮಟ್ಟ ಸ್ಪರ್ಧೆಯಲ್ಲಿ ಕೊಡಗಿನ ಕ್ರೀಡಾಪಟು ಹಸ್ಸನ್ ಚಿನ್ನದ ಪದಕ ಗೆದ್ದು ರಾಷ್ಟ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಏಷಿಯನ್ ಆರ್ಮ್ ರೆಸ್ಲಿಂಗ್ ಅಸೋಸಿಯೇಷನ್, ವರ್ಲ್ಡ್ ಆರ್ಮ್ ರೆಸ್ಲಿಂಗ್ ಅಸೋಸಿಯೇಷನ್ ಸಹಯೋಗದಲ್ಲಿ ಕರ್ನಾಟಕ ಆರ್ಮ್ ರೆಸ್ಲಿಂಗ್ ಅಸೋಸಿಯೇಷನ್ ಬೆಂಗಳೂರಿನಲ್ಲಿ ಆಯೋಜಿದ್ದ ಸ್ಪರ್ಧೆಯಲ್ಲಿ ಹಸ್ಸನ್ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾರೆ.
ಜೂನ್ 6 ರಿಂದ 10ರ ವರೆಗೆ ಮಹಾರಾಷ್ಟ್ರದ ನಾಗಪುರ್ ನಲ್ಲಿ ರಾಷ್ಟ್ರ ಮಟ್ಟದ ಕ್ರೀಡೆ ಜರುಗಲಿದ್ದು, ಹಸ್ಸನ್ ಅವರಿಗೆ ಬೆಂಗಳೂರಿನ ಕೋಚ್ ದೀಪಕ್ ತರಬೇತಿ ನೀಡುತ್ತಿದ್ದಾರೆ.
ಬಡತನದ ಕಾರಣದಿಂದ ಅವಕಾಶ ವಂಚಿತನಾಗುತ್ತಿರುವ ಅಪ್ರತಿಮ ಕ್ರೀಡಾಪಟು ಹಸ್ಸನ್ ಕುರಿತು ಈ ಹಿಂದೆ ಪ್ರತಿನಿಧಿ ವಿಶೇಷ ವರದಿ ಪ್ರಕಟಿಸಿತ್ತು. ಇದನ್ನು ಗಮನಿಸಿದ ಅರೆಕಾಡು ಗ್ರಾಮ ಪಂಚಾಯತಿಯು, ಇದೀಗ ಹಸ್ಸನ್ ಅವರಿಗೆ ಕ್ರೀಡಾಕೂಟಕ್ಕೆ ತೆರಳಲು ಹತ್ತು ಸಾವಿರ ರೂ. ನೀಡುವ ಭರವಸೆ ನೀಡಿದೆ. ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ವತಿಯಿಂದ ಟಿಎ ಡಿಎ ನೀಡುವ ಭರವಸೆಯನ್ನೂ ನೀಡಿರುವುದಾಗಿ ಹಸ್ಸನ್ ಪ್ರತಿನಿಧಿಗೆ ತಿಳಿಸಿದ್ದಾರೆ. ದಾನಿಗಳ ಮತ್ತಷ್ಟು ಪ್ರೋತ್ಸಾಹ ಇದ್ದಲ್ಲಿ ಹಸ್ಸನ್ ಅವರಂತಹ ಅಪ್ರತಿಮ ಕ್ರೀಡಾಪಟುವು ಪಂಜಕುಸ್ತಿಯಲ್ಲಿ ದೇಶವನ್ನು ಪ್ರತಿನಿಧಿಸುವಷ್ಟರ ಮಟ್ಟಿಗೆ ಸಾಧನೆ ಮಾಡಲಿದ್ದಾರೆ.