ಸೋಮವಾರಪೇಟೆ ಜ.24 : ಶಾಲೆ ಆವರಣಕ್ಕೆ ಹಾವು ಬರುತ್ತಿವೆ. ಬೀದಿನಾಯಿಗಳಿಂದ ನಮ್ಮನ್ನು ರಕ್ಷಿಸಿ, ಶಾಲೆಯ ಮೇಲ್ಚಾವಣಿ ಮುರಿದು ಬೀಳುವ ಹಂತದಲ್ಲಿದೆ. ಶೌಚಾಲಯಗಳನ್ನು ನಿರ್ಮಿಸಿಕೊಡುವಂತೆ ಮಕ್ಕಳ ಗ್ರಾಮಸಭೆಯಲ್ಲಿ ವಿವಿಧ ಬೇಡಿಕೆಗಳ ಸುರಿಮಳೆಗೈದರು.
ದೊಡ್ಡಮಳ್ತೆ ಗ್ರಾಮ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ನಾವು ಪ್ರತಿಷ್ಠಾನ ವತಿಯಿಂದ ಗೆಜ್ಜೆಹಣಕೋಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ಗೆಜ್ಜೆಹಣಕೋಡು ಶಾಲೆಯ 7ನೇ ತರಗತಿ ರತನ್ ತನ್ನ ಶಾಲೆಯ ಸಮಸ್ಯೆಗಳನ್ನು ಹೇಳಿಕೊಂಡ. ಮೈದಾನಕ್ಕೆ ತಂತಿಬೇಲಿ, ಹಾವುಗಳಿಂದ ನಾವು ರಕ್ಷಣೆ ಪಡೆಯಬೇಕಾದರೆ ಕಾಂಪೌಂಡ್ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಶಾಶ್ವತ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಶೌಚಾಲಯ ಸರಿಪಡಿಕೊಡವಂತೆ ಮನವಿ ಮಾಡಿದರು.
ನಮ್ಮ ಶಾಲೆಯಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಾರ್ಯಕ್ರಮದ ಸಂದರ್ಭ ಶಾಲಾ ಆವರಣದಲ್ಲಿರುವ ವಿದ್ಯುತ್ ಕಂಬವನ್ನು ಬೇರೆಡೆ ಸ್ಥಳಾಂತರ ಮಾಡಬೇಕೆಂದು ಮನವಿ ಸಲ್ಲಿಸಲಾಗಿದ್ದು, ಕ್ರಮ ಕೈಗೊಳ್ಳುವ ಭರವಸೆಯನ್ನು ಜೆ.ಇ.ನೀಡಿದ್ದರು. ಆದರೆ ಒಂದು ವರ್ಷ ಕಳೆದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದ ವಿದ್ಯಾರ್ಥಿ, ವಿದ್ಯುತ್ ತಂತಿಗಳು ಕೆಳ ಭಾಗದಲ್ಲಿ ತೇಲಾಡುತ್ತಿವೆ ಎಂದರು.
ಕಾಂಪೌಂಡ್ ಕಾಮಗಾರಿ ಪೂರ್ಣಗೊಳಿಸಲಾಗುವುದು. ಎಲ್ಲಾ ಬೇಡಿಕೆಗಳನ್ನು ಈಡೇರಿಸುವ ಪ್ರಯತ್ನ ಮಾಡಲಾಗುವುದು. ಸೆಸ್ಕ್ ಅಧಿಕಾರಿಗಳು ಮತ್ತೊಮ್ಮೆ ಪತ್ರ ಬರೆಯುವುದಾಗಿ ಪಿಡಿಒ ಶ್ರೀನಿವಾಸ್ ಭರವಸೆ ನೀಡಿದರು.
ದೊಡ್ಡಮಳ್ತೆ ಹಿರಿಯ ಪ್ರಾಥಮಿಕ ಶಾಲಾ ಆವರಣದೊಳಗೆ ಕಿಡಿಗೇಡಿಗಳು ನುಗ್ಗಿ ಗಲೀಜು ಮಾಡುತ್ತಾರೆ. ಶೌಚಗೃಹದ ಬಾಗಿಲನ್ನು ಒಡೆದು ಹಾಕಿದ್ದಾರೆ. ಈಗ ಶೌಚಗೃಹಕ್ಕೆ ಬಾಗಿಲು ಇಲ್ಲ. ಎಲ್ಲಾ ಸಮಸೈಗಳನ್ನು ಪರಿಹರಿಸಬೇಕು ಎಂದು 7ನೇ ತರಗತಿ ಲಕ್ಷ್ಮೀ ಬೇಡಿಕೆ ಇಟ್ಟರು. ಶಾಲೆಯಲ್ಲಿ 68 ಮಕ್ಕಳಿದ್ದಾರೆ. ಊಟದ ಹಾಲ್ ಇಲ್ಲ. ನೂತನ ಸಭಾಂಗಣವನ್ನು ನಿರ್ಮಿಸಿಕೊಡುವಂತೆ 6ನೇ ತರಗತಿ ದೃಶನ್ ಕೇಳಿದಳು.
ನಮ್ಮ ಶಾಲೆಯಲ್ಲಿ 10 ಕಂಪ್ಯೂಟರ್‍ಗಳಿವೆ. 5 ಹಾಳಾಗಿವೆ. ದುರಸ್ತಿ ಮಾಡಿಸಿ, ಒಬ್ಬ ಕಂಪ್ಯೂಟರ್ ಟೀಚರ್ ಕೊಡಬೇಕು ಎಂದು 7ನೇ ತರಗತಿ ಫಾತಿಮಾ ಕೇಳಿದಳು. ಬೀದಿನಾಯಿಗಳ ಹಾವಳಿ ಬಗ್ಗೆ ಮನವರಿಕೆ ಮಾಡಿದಳು.
ಕೋಗೇಕೋಡಿ ಕಿರಿಯ ಪ್ರಾಥಮಿಕ ಶಾಲೆಯ ಒಂದು ಕೊಠಡಿ ಬೀಳುವ ಹಂತದಲ್ಲಿದೆ. ಕಾಂಪೌಂಡ್ ಬೇಕು. ಕಂಪ್ಯೂಟರ್ ಬೇಕು. ಹೂ ತೋಟ ನಿರ್ಮಿಸಿಕೊಡಿ ಎಂದು 5ನೇ ತರಗತಿ ವಿದ್ಯಾರ್ಥಿನಿ ದೀಪ್ತಿ ಬೇಡಿಕೆಯಿಟ್ಟಳು.
ಮಕ್ಕಳ ಬೇಡಿಕೆಗಳನ್ನು ಆಲಿಸಿದ ಪಂಚಾಯಿತಿ ಅಧ್ಯಕ್ಷೆ ಪ್ರಮೀಳಾ ಮತ್ತು ಪಿಡಿಒ ಶ್ರೀನಿವಾಸ್ ಅವರುಗಳು, ಮಕ್ಕಳು ಬೇಡಿಕೆಗಳನ್ನು ಈಡೇರಿಸುವ ಜವಾಬ್ದಾರಿ ನಮ್ಮದಾಗಿದೆ. ಎಲ್ಲಾ ವಿಷಯಗಳನ್ನು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಾವು ಪ್ರತಿಷ್ಠಾನದ ಕಾರ್ಯಕಾರಿ ನಿರ್ದೇಶಕರಾದ ಸುಮನಾ ಗೌತಮ್ ಮಾತನಾಡಿ, ಮಕ್ಕಳು ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳುವ ಹಕ್ಕನ್ನು ಹೊಂದಿದ್ದಾರೆ. ಇಂದಿನ ಮಕ್ಕಳು ಇಂದಿನ ಪ್ರಜೆಗಳಾಗಿದ್ದು, ಎಲ್ಲಾ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಅಂಗಸಂಸ್ಥೆಗಳ ಕರ್ತವ್ಯವಾಗಿದೆ. ಸಾಬೂಬು ಹೇಳಿ ನುಣಿಚಿಕೊಳ್ಳುವ ಪ್ರಯತ್ನ ಸಲ್ಲದು. ಭಾರತದ ಗ್ರಾಮೀಣ ಭಾಗದ ಜನಸಂಖ್ಯೆಯಲ್ಲಿ ಶೇ.34 ರಷ್ಟು ಮಕ್ಕಳಿದ್ದಾರೆ. ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬಡ ಮಕ್ಕಳು ಗ್ರಾಮೀಣ ಭಾಗದಲ್ಲಿವೆ. ಬಣ್ಣ, ಜಾತಿ, ಕಾರಣಕ್ಕೆ ಯಾವುದೇ ಮಕ್ಕಳು ಸೌಲಭ್ಯಗಳಿಂದ ವಂಚಿತರಾಗಬಾರದು ಎಂದು ಹೇಳಿದರು. ಮಕ್ಕಳಲ್ಲಿ ದಡ್ಡ, ಬುದ್ದಿವಂತ ಎಂಬ ವರ್ಗವಿಲ್ಲ. ಬುದ್ದಿಮತ್ತೆಯ ವ್ಯತ್ಯಾಸ ಮಾತ್ರ ಇರುತ್ತದೆ. ಈ ಬಗ್ಗೆ ಶಿಕ್ಷಕರು ಸೂಕ್ಷ್ಮವಾಗಿರಬೇಕು ಎಂದು ಹೇಳಿದರು.
ಸರ್ಕಾರ ನಿರ್ಲಕ್ಷ್ಯ ಹಾಗು ಅನುದಾನ ಕಲ್ಪಿಸದ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಗ್ರಾಮೀಣ ಭಾಗದ ಬಹುತೇಕ ಶಾಲೆಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಮಳೆಗಾಲದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಭಯ ಪಡುತ್ತಿದ್ದಾರೆ. ಸ್ವಚ ಶೌಚಾಲಯವಿಲ್ಲದ ಶಾಲೆಗೆ ಹೇಗೆ ಮಕ್ಕಳನ್ನು ಕಳುಹಿಸುತ್ತಾರೆ ಎಂದು ಪಂಚಾಯಿತಿ ಸದಸ್ಯ ಗೋಪಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ರಶಿದಾ, ಸದಸ್ಯ ಶಂಕರ್, ಮುಖ್ಯ ಶಿಕ್ಷಕಿ ಹೇಮಾವತಿ, ನಾವು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು ಇದ್ದರು.