ಸೋಮವಾರಪೇಟೆ ಫೆ.7 : ಮಡಿಕೇರಿ ವನ್ಯಜೀವಿ ವಿಭಾಗ ಹಾಗೂ ಪುಷ್ಪಗಿರಿ ವನ್ಯಜೀವಿ ವಲಯದ ವತಿಯಿಂದ ಕಾಡ್ಗಿಚ್ಚಿನಿಂದ ಅರಣ್ಯ ರಕ್ಷಣೆ ಬಗ್ಗೆ ಜನ ಜಾಗೃತಿ ಬೀದಿ ನಾಟಕವನ್ನು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಪ್ರದರ್ಶಿಸಲಾಯಿತು.
ಕಾಲೇಜಿನ ಉಪಪ್ರಾಂಶುಪಾಲರಾದ ಬಸವರಾಜಪ್ಪ ಜಾಗೃತಿ ನಾಟಕಕ್ಕೆ ಚಾಲನೆ ನೀಡಿದರು. ಉಪ ವಲಯ ಅರಣ್ಯಾಧಿಕಾರಿ ಪಿ.ಟಿ.ಶಶಿ ಮಾತನಾಡಿ, ಅರಣ್ಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಅರಣ್ಯದಲ್ಲಿ ಸಾವಿರಾರು ಪ್ರಾಣಿ, ಪಕ್ಷಿ, ಜೀವಸಂಕುಲಗಳಿರುತ್ತವೆ. ಒಮ್ಮೆ ಬೆಂಕಿ ಬಿದ್ದರೆ, ಎಲ್ಲವೂ ಸತ್ತು ಹೋಗುತ್ತವೆ. ಬೆಂಕಿಯಿಂದ ಅರಣ್ಯ ರಕ್ಷಿಸುವ ಪ್ರತಿಜ್ಞೆ ಮಾಡಬೇಕು. ಅಲ್ಲದೆ ವಿದ್ಯಾರ್ಥಿಗಳು ಮನೆ ಹಾಗು ನೆರೆಹೊರೆಯವರಿಗೆ ಜಾಗೃತಿ ಮೂಡಿಸಬೇಕು ಎಂದರು. ಕಾಡ್ಗಿಚ್ಚಿನಿಂದ ಪರಿಸರಕ್ಕೆ ಆಗುವ ದುಷ್ಪರಿಣಾಮ , ಪ್ರಕೃತಿ ಅಸಮತೋಲನದ ಬಗ್ಗೆ ಮತ್ತು ಕಾಡ್ಗಿಚ್ಚಿನಿಂದ ಅರಣ್ಯ ರಕ್ಷಣೆ ಹಾಗು ಸಾರ್ವಜನಿಕ ಆಸ್ತಿ ರಕ್ಷಣೆಗೆ ತೆಗೆದು ಕೊಳ್ಳುವ ಮುಂಜಾಗ್ರತಾ ಕ್ರಮಗಳನ್ನು ವಿವರಿಸಿದರು.