ಮಡಿಕೇರಿ ಫೆ.10 NEWS DESK : ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಮೂಲಭೂತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫೆ.13 ರಂದು ತಾಲ್ಲೂಕು ಮಟ್ಟದಲ್ಲಿ, ಫೆ.14 ರಂದು ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದಲ್ಲದೆ, ಫೆ.15 ರಂದು ‘ನಮ್ಮ ನಡೆ ಮುಖ್ಯ ಮಂತ್ರಿಗಳ ಮನೆ ಕಡೆಗೆ’ ಎನ್ನುವ ಹೋರಾಟವನ್ನು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವುದಾಗಿ ಕರ್ನಾಟಕ ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ ಪಟ್ಟಣ ಪಂಚಾಯ್ತಿ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಡಿ.ಈರಪ್ಪ ಶೆಟ್ಟಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣ ಪಂಚಾಯ್ತಿ, ಪುರಸಭೆ, ನಗರಸಭೆಗಳಲ್ಲಿ ನೂರಾರು ಮಂದಿ ಹೊರಗುತ್ತಿಗೆಯಡಿ, ಚಾಲಕರುಗಳಾಗಿ, ನೀರು ಗಂಟಿಗಳಾಗಿ, ಸ್ವಚ್ಛತಾ ಸಿಬ್ಬಂದಿಗಳಾಗಿ, ಲೋಡರ್ಸ್ಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರುಗಳನ್ನು ಸರ್ಕಾರ ನೇರ ಪಾವತಿಗೆ ಒಳಪಡಿಸುವ ಮೂಲಕ ಅವರ ವೇತನ ಪಾವತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನೇರ ಪಾವತಿಯ ಪ್ರಮುಖ ಬೇಡಿಕೆ ಹಿನ್ನೆಲೆಯಲ್ಲಿ ನಡೆಯುವ ಪ್ರತಿಭಟನೆ ಸಂದರ್ಭ ರಾಜ್ಯಾದ್ಯಂತ ಹೊರ ಗುತ್ತಿಗೆ ನೌಕರರು ಸ್ವಚ್ಛತಾ ಕಾರ್ಯ ಮತ್ತು ನೀರು ಸರಬರಾಜು ಕೆಲಸವನ್ನು ಸ್ಥಗಿತಗೊಳಿಸಿ ಹೋರಾಟಕ್ಕೆ ಇಳಿಯಲಿದ್ದಾರೆಂದು ಸ್ಪಷ್ಟಪಡಿಸಿದ ಈರಪ್ಪಶೆಟ್ಟಿ, ನಮ್ಮ ಬೇಡಿಕೆಗೆ ಸರ್ಕಾರ ಆದ್ಯ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸಬೇಕೆಂದು ಹಲವಾರು ಬಾರಿ ಸರ್ಕಾರದ ಗಮನ ಸೆಳೆಯಲಾಗಿದ್ದರು, ಸೂಕ್ತ ಸ್ಪಂದನ ದೊರಕಿಲ್ಲ.ನೌಕರರನ್ನು ನೇರಪಾವತಿಗೆ ಒಳಪಡಿಸಿದಲ್ಲಿ ಸರ್ಕಾರಕ್ಕೆ ಜಿಎಸ್ಟಿ ಉಳಿತಾಯದ ಜೊತೆಗೆ, ನೌರರಿಗೆ ಸೇವಾಭದ್ರತೆ ದೊರಕುವ ಮೂಲಕ ಏಜೆನ್ಸಿಗಳ ಕಿರುಕುಳ ತಪ್ಪಲಿದೆಯೆಂದು ಅಭಿಪ್ರಾಯಿಸಿದರು.
ರಾಜ್ಯ ಮುನಿಸಿಪಲ್ ಕಾಯ್ದೆ ಪ್ರಕಾರ ಹೊರ ಗುತ್ತಿಗೆಯಡಿ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರು ಪೌರ ಕಾರ್ಮಿಕರೆ ಆಗಿದ್ದಾರೆ. ಇವರನ್ನು ನೇರ ನೇಮಪಾವತಿಗೆ ಒಳಪಡಿಸಲು 2022 ರ ಜು.1 ರಂದು ಮುಖ್ಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನವನ್ನು ಕೈಗೊಳ್ಳಲಾಗಿದ್ದರು, ಅದರ ಅನುಷ್ಠಾನ ಮಾತ್ರ ಸಾಧ್ಯವಾಗಿಲ್ಲವೆಂದು ಬೇಸರ ವ್ಯಕಪಡಿಸಿದರು.
ಬಜೆಟ್ನಲ್ಲಿ ಘೋಷಣೆಯಾಗಲಿ : ನಗರ ಸ್ಥಳೀಯ ಸಂಸ್ಥೆಗಳ ಎಲ್ಲಾ ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ತರುವ ಅಂಶವನ್ನು ಬಜೆಟ್ನಲ್ಲಿ ಘೋಷಿಸಬೇಕೆಂದು ಒತ್ತಾಯಿಸಿದ ಈರಪ್ಪ ಶೆಟ್ಟಿ, ಪೌರಾಡಳಿತ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತಂದು ಅಗತ್ಯಕ್ಕೆ ಅನುಗುಣವಾಗಿ ಪೌರ ಚಾಲಕ ಹುದ್ದೆಗಳನ್ನು ಸೃಷ್ಟಿಸಬೇಕು ಮತ್ತು ಖಾಲಿ ಇರುವ ಪೌರ ಕಾರ್ಮಿಕ ಹುದ್ದೆಗಳ ಭರ್ತಿಯನ್ನು ಬಜೆಟ್ನಲ್ಲಿ ಘೋಷಿಸಬೇಕೆಂದು ಆಗ್ರಹಿಸಿದರು.
ತಾರತಮ್ಯ ಧೋರಣೆ : ಸಂಕಷ್ಟ ಭತ್ಯೆಯನ್ನು ಸ್ಥಳೀಯ ಸಂಸ್ಥೆಗಳ ಖಾಯಂ ಪೌರಕಾರ್ಮಿಕರಿಗಷ್ಟೆ ನೀಡಲಾಗಿದೆ. ಇದು ತಾರತಮ್ಯದ ಧೋರಣೆಯೆಂದು ಟೀಕಿಸಿದ ಅವರು, ನಗರಾಭಿವೃದ್ಧಿ ಇಲಾಖೆಯು ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಈ ಹಿನ್ನೆಲೆ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟಕ್ಕೆ ಮುಂದಾಗಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಎಸ್.ಜಿ. ಕೃಷ್ಣ, ಕಾರ್ಯದರ್ಶಿ ಎಂ. ಮನೋಜ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಟಿ.ಬಿ. ರಮೇಶ್ ಕುಟ್ಟಪ್ಪ, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಪಿ.ಕೆ. ಹೇಮಂತ್ ಕುಮಾರ್, ನೀರು ಸರಬರಾಜು ನೌಕರರ ಜಿಲ್ಲಾಧ್ಯಕ್ಷ ಶಿವಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು.