ನಾಪೋಕ್ಲು ಫೆ.16 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಕೊಡಗು ಜಿಲ್ಲೆಯ ಪಾನಮುಕ್ತ ನವಜೀವನ ಸಮಿತಿ ಸದಸ್ಯರಿಗೆ ತರಬೇತಿ ಕಾರ್ಯಾಗಾರ ನಡೆಯಿತು.
ನಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ನಡೆಯದ ಕಾರ್ಯಕ್ರಮವನ್ನು ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಉದ್ಘಾಟಿಸಿ, ನಮ್ಮ ಜೀವನದಲ್ಲಿ ಸೇವಾ ಮನೋಭಾವನೆಯನ್ನು ರೂಡಿಸಿಕೊಂಡರೆ ನಮ್ಮ ಜನ್ಮ ಸಾರ್ಥಕವಾಗಲೂ ಸಾಧ್ಯ. ಜೊತೆಗೆ ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಪಾನಮುಕ್ತರನ್ನು ನಿರಂತರವಾಗಿ ಅನುಪಾಲನೆ ಮಾಡುವುದು ಒಂದು ಪುಣ್ಯದ ಕೆಲಸ ಎಂದರು.
ಉಡುಪಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ ಮಾತನಾಡಿ, ಮಗುವನ್ನು ತಾಯಿಯು ಕೈಹಿಡಿದು ಪೋಷಿಸಿದಂತೆ ನವ ಜೀವನ ಸಮಿತಿ ಸದಸ್ಯರನ್ನು ಪೋಷಣೆ ಮಾಡಿದಾಗ ಜನಜಾಗೃತಿ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಡಗು ಜಿಲ್ಲೆಯಲ್ಲಿ ಒಟ್ಟು ಇದುವರೆಗೆ 55 ಮದ್ಯವರ್ಜನ ಶಿಬಿರಗಳನ್ನ ಅತ್ಯುತ್ತಮವಾಗಿ ಆಯೋಜಿಸಲಾಗಿದೆ. ಶಿಬಿರಗಳಲ್ಲಿ ಒಟ್ಟು 4350 ಮದ್ಯ ವ್ಯಸನಿ ಗಳನ್ನು ಸೇರಿಸಿ ಪರಿವರ್ತನೆಗೊಳಿಸಲಾಗಿದೆ. ಇದರಲ್ಲಿ ಶೇ.90 ಜನರು ಕುಡಿತವನ್ನು ಬಿಟ್ಟು ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಯೋಜನಾಧಿಕಾರಿಗಳಾದ ಪುರುಷೋತ್ತಮ, ಮಡಿಕೇರಿ ವಿರಾಜಪೇಟೆ ಹಾಗೂ ಸೋಮವಾರಪೇಟೆ ತಾಲೂಕುಗಳಿಂದ ಒಟ್ಟು 30 ಜನ ನವ ಜೀವನ ಪೋಷಕರು ಭಾಗವಹಿಸಿ ತರಬೇತಿಯನ್ನು ಪಡೆದುಕೊಂಡರು.
ತರಬೇತಿಯನ್ನು ಪಡೆದುಕೊಂಡ ಪೋಷಕರಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು. ಕಾರ್ಯಕ್ರಮದ ನಿರ್ವಹಣೆಯನ್ನು ಜನಜಾಗೃತಿ ಮೇಲ್ವಿಚಾರಕರು ಕೆ.ನಿತೇಶ್ ನೆರವೇರಿಸಿದರು. ಪೋಷಕರಾದ ರೂಪೇಶ್ ವಂದಿಸಿದರು.
ವರದಿ : ದುಗ್ಗಳ ಸದಾನಂದ.