ಮಡಿಕೇರಿ ಫೆ.16 NEWS DESK : ಕರ್ನಾಟಕದ ಇತಿಹಾಸದಲ್ಲೇ ಇದೊಂದು ನಿರಾಶಾದಾಯಕ ಬಜೆಟ್ ಆಗಿದೆ, ಕೊಡಗಿನಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರಿದ್ದರೂ ವಿಶೇಷ ಅನುದಾನ ಅಥವಾ ಯೋಜನೆಗಳನ್ನು ಘೋಷಿಸದೇ ಇರುವುದು ನಿರಾಶೆಗೆ ಕಾರಣವಾಗಿದೆ ಎಂದು ಕೊಡಗು ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ ತೇಲಪಂಡ ಶಿವಕುಮಾರ್ ನಾಣಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಜನರ ಕಿವಿಗೆ ಹೂ ಇಡುವ ಬಜೆಟ್ ಮಮಡಿಸಲಾಗಿದೆ ಎಂದು ಟೀಕಿಸಿದ್ದಾರೆ.
ಕೊಡಗು ಜಿಲ್ಲೆ ಮತ್ತು ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಯಾವುದೇ ಕೊಡುಗೆ ನೀಡಿಲ್ಲ. ಕ್ರೀಡಾ ಪ್ರತಿಭೆಗಳ ಜಿಲ್ಲೆಯಾಗಿರುವ ಕೊಡಗಿನ ಕ್ರೀಡಾಕ್ಷೇತ್ರಕ್ಕೆ ಅನುದಾನ ಘೋಷಿಸುವ ನಿರೀಕ್ಷೆ ಇತ್ತಾದರೂ ಇದು ಹುಸಿಯಾಗಿದೆ. ವನ್ಯಜೀವಿ ಹಾಗೂ ಮಾನವ ಸಂಘರ್ಷ ತಡೆಗೆ ಯಾವುದೇ ಪರಿಹಾರ ಯೋಜನೆ ಘೋಷಿಸಿಲ್ಲ. ಗ್ಯಾರಂಟಿ ಯೋಜನೆಯ ಭರವಸೆಗಳನ್ನು ಈಡೇರಿಸಲು ಸುಮಾರು 60 ಸಾವಿರ ಕೋಟಿಗಿಂತ ಅಧಿಕ ಹಣ ಬೇಕು. ಪರಿಸ್ಥಿತಿ ಹೀಗಿರುವಾಗ ಅಭಿವೃದ್ಧಿ ಕಾರ್ಯಗಳಿಗೆ ಹಣ ಹೊಂದಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ತೆರಿಗೆ ಹೆಚ್ಚಳದ ಹೊರೆಯನ್ನು ಜನಸಾಮಾನ್ಯರ ಮೇಲೆ ಹಾಕಲಾಗಿದೆ. ಮೋಟರು ವಾಹನ ತೆರಿಗೆ ಶೇ.7, ನೋಂದಣಿ ಮುದ್ರಾಂಕ ಶೇ.14, ಅಬಕಾರಿ ಸುಂಕ ಶೇ.20, ಇತರ ವಾಣಿಜ್ಯ ತೆರಿಗೆ ಸುಮಾರು ಶೇ.58 ಮತ್ತು ಇತರ ತೆರಿಗೆ ಸುಮಾರು ಶೇ2 ರಷ್ಟು ಹೆಚ್ಚಾಗಿದೆ. ಇದು ಜನಸಾಮಾನ್ಯರು, ಮಧ್ಯಮ ವರ್ಗದವರು ಮತ್ತು ಬಡವರನ್ನು ಸಂಕಷ್ಟಕ್ಕೆ ಸಿಲುಕಿಸುವುದರಲ್ಲಿ ಸಂಶಯವಿಲ್ಲ. ಒಟ್ಟಿನಲ್ಲಿ ಇದೊಂದು ತೆರಿಗೆ ಹೊರೆಯ ಬಜೆಟ್ ಆಗಿದೆ ಎಂದು ಶಿವಕುಮಾರ್ ನಾಣಯ್ಯ ಅಭಿಪ್ರಾಯಪಟ್ಟಿದ್ದಾರೆ.




































