ಮಡಿಕೇರಿ ಫೆ.16 NEWS DESK : ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದಿಂದ ಫೆ.25 ರಂದು ಗೋಣಿಕೊಪ್ಪಲಿನಲ್ಲಿ ಜಿಲ್ಲೆಯ ಮಾಜಿ ಸೈನಿಕರ ಮತ್ತು ವಿಧವೆಯರ ಕುಂದುಕೊರತೆಯ ಅಹವಾಲು ಆಲಿಸುವ ಸಭೆ ನಡೆಯಲಿದ್ದು, ಭೂಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ ಎ.ಕೆ.ಸಿಂಗ್ ಭೇಟಿ ನೀಡಲಿದ್ದಾರೆ ಎಂದು ಸಂಘದ ಅಧ್ಯಕ್ಷ ನಿವೃತ್ತ ಮೇಜರ್ ಬಿ.ಎ.ಕಾರ್ಯಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ಸಭೆ ನಡೆಯಲಿದ್ದು, ಜಿಲ್ಲೆಯ ಮಾಜಿ ಸೈನಿಕರ ಮತ್ತು ವಿಧವೆಯರ ಕುಂದುಕೊರತೆಯ ಅಹವಾಲನ್ನು ಭೂಸೇನಾಧಿಕಾರಿ ಲೆಫ್ಟಿನೆಂಟ್ ಜನರಲ್ ಎ.ಕೆ ಸಿಂಗ್ ಆಗಮಿಸಲಿದ್ದು, ಕೊಡಗಿನ ಎಲ್ಲಾ ಮಾಜಿ ಸೈನಿಕರು, ವಿಧವೆಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಿ ತಮ್ಮ ಅಹವಾಲನ್ನು ನೀಡಿ ಕುಂದುಕೊರತೆಗಳನ್ನು ಬಗೆಹರಿಸಿಕೊಳ್ಳಲು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪೆನ್ಷನ್ಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳು, ಇಸಿಹೆಚ್ಸಿ ಸೇರಿದಂತೆ ತಮ್ಮ ಸಮಸ್ಯೆಗಳನ್ನು ಹೇಳಲು ಅವಕಾಶವಿದೆ. ಇದರೊಂದಿಗೆ ಕಾನ್ಸರ್ ಜಾಗೃತಿ ಕಾರ್ಯಕ್ರಮ, ಕಣ್ಣು ಹಾಗೂ ದಂತ ಪರೀಕ್ಷೆ ಸೇರಿದಂತೆ ವಿವಿಧ ರೀತಿಯ ಆರೋಗ್ಯ ತಪಾಸಣಾ ಕಾರ್ಯಕ್ರಮ ನಡೆಯಲಿದೆ ಎಂದರು.
ಸಭೆಯಲ್ಲಿ ಮಾಜಿ ಸೈನಿಕರಿಗೆ ಜಾಗ ಮಂಜೂರಾತಿ ಮಾಡಬೇಕು, ಕೊಡಗಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಇಸಿಹೆಚ್ಸಿಗೆ ನಿವೇಶನ ಒದಗಿಸಬೇಕು, ಯುದ್ಧದಲ್ಲಿ ವೀರಮರಣವಪ್ಪಿದವರಿಗೆ ಸರಕಾರದ ಆದೇಶದ ಪ್ರಕಾರ ಸರಕಾರಿ ಜಮೀನು ನೀಡಬೇಕು, ಕನಿಷ್ಟ 3 ತಿಂಗಳಿಗೊಮ್ಮೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮತ್ತು ಸೈನಿಕ ಇಲಾಖೆಯ ಅಧಿಕಾರಿ ಉಪಸ್ಥಿತಿಯಲ್ಲಿ ಸೈನಿಕ ಅದಾಲತ್ ನಡೆಸಬೇಕು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆ ಸಂಬಂಧಪಟ್ಟಂತೆ ಭೂಸೇನಾಧಿಕಾರಿಯ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು.
ಸಮಾವೇಶಕ್ಕೆ ಹಾಜಾರಾಗುವವರಿಗೆ ನಾನಾ ಭಾಗದಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕಾರ್ಯಪ್ಪ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ನಿವೃತ್ತ ಕರ್ನಲ್ ಚಿಣ್ಣಪ್ಪ, ಗೌರವ ಕಾರ್ಯದರ್ಶಿ ನಿವೃತ್ತ ಮೇಜರ್ ಒ.ಎಸ್.ಚಿಂಗಪ್ಪ, ಜಿಲ್ಲಾ ಕಾರ್ಯದರ್ಶಿ ನಿವೃತ್ತ ಸುಬೇದಾರ್ ಮೇಜರ್ ವಾಸಪ್ಪ, ಸಂಘದ ನಾಪೋಕ್ಲು ವಲಯ ಅಧ್ಯಕ್ಷ ಕೆ.ಕೆ.ನಾಣಯ್ಯ ಹಾಗೂ ಮಡಿಕೇರಿ ನಗರ ಅಧ್ಯಕ್ಷ ಪಿ.ಕೆ.ಕುಟ್ಟಪ್ಪ ಉಪಸ್ಥಿತರಿದ್ದರು.