ಮಡಿಕೇರಿ ಫೆ.17 NEWS DESK : ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ವಿಜಯನಗರದಲ್ಲಿ ಆರಂಭಿಸಿರುವ ಕೂಸಿನ ಮನೆಯನ್ನು ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷ ಭಾಸ್ಕರ್ ನಾಯಕ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಸರಕಾರದ ಮಹತ್ವಾಕಾಂಕ್ಷೆಯ ಈ ಯೋಜನೆ ಮೂಲಕ ಉದ್ಯೋಗ ಖಾತ್ರಿ ಯೋಜನೆಯಡಿ ಕಾರ್ಯನಿರ್ವಹಿಸುವ ಕಾರ್ಮಿಕರ ಮಕ್ಕಳ ಪಾಲನೆಗೆ ಸಹಕಾರಿಯಾಗಲಿದೆ. ಇತರೆ ಕೂಲಿ ಕಾರ್ಮಿಕರು ಕೂಡ ತಮ್ಮ ಮಕ್ಕಳನ್ನು ಇಲ್ಲಿಗೆ ದಾಖಲಿಸಿ ನಿಶ್ಚಿಂತೆಯಾಗಿ ಕೆಲಸಕ್ಕೆ ತೆರಳಬಹುದು ಎಂದರು.
6 ತಿಂಗಳಿಂದ ಮೂರು ವರ್ಷದ ಮಕ್ಕಳನ್ನು ಇಲ್ಲಿ ದಾಖಲಿಸಬಹುದು. ದಾಖಲಾದ ಮಕ್ಕಳನ್ನು ನಿಭಾಯಿಸಲು ಮೂವರು ಕೇರ್ ಟೇಕರ್ ಗಳನ್ನು ನಿಯೋಜಿಸಿ ತೆರಬೇತಿ ನೀಡಲಾಗಿದೆ. ಮಕ್ಕಳಿಗೆ ಇಲ್ಲಿ ಪ್ರತಿದಿನ ಪೌಷ್ಠಿಕ ಆಹಾರ ಒದಗಿಸಲಾಗುವುದು. ಜಿಲ್ಲೆಯಲ್ಲಿಯೇ ನಮ್ಮ ಗ್ರಾ.ಪಂ ವತಿಯಿಂದ ಈ ಯೋಜನೆ ಅನುಷ್ಠಾನ ಸಮರ್ಪಕವಾಗಿ ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಗ್ರಾಪಂ ಸದಸ್ಯರಾದ ಗಿರೀಶ್, ಖತೀಜ, ಜ್ಯೋತಿ, ಈರಯ್ಯ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಮತ್ತು ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.