ಮಡಿಕೇರಿ ಫೆ.17 NEWS DESK : ಕೊಡಗು ಆಮ್ ಆದ್ಮಿ ಪಾರ್ಟಿಯ ನಡೆ ಹಳ್ಳಿ ಕಡೆ ಕಾರ್ಯಕ್ರಮ ಜಿಲ್ಲೆಯಾದ್ಯಂತ ಯಶಸ್ವಿಯಾಗಿದೆ ಎಂದು ಆಪ್ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ತಿಳಿಸಿದ್ದಾರೆ. ಗ್ರಾಮೀಣ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರಲ್ಲಿ ಸಮಾಲೋಚನೆ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ, ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.
ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ, ಕರಡಿಗೊಡು, ಆಸ್ಥಾನ, ಮಾಲ್ದಾರೆ, ಚೆನ್ನಂಗಿ, ಪಾಲಿಬೆಟ್ಟ, ಅಮ್ಮತ್ತಿ, ಚಂಬೆಬೆಳ್ಳೂರು, ಕೆದಮುಳ್ಳೂರು, ಆರ್ಜಿ, ಬೋಟೋಳಿ ಮತ್ತು ತೋರಾ ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆಯಲಾಯಿತು.
ಚಂಬೆಬೆಳ್ಳೂರು ಗ್ರಾಮದ ಮಗ್ಗುಲ ಮತ್ತು ಪೂದಕೋಟೆ ಶಾಲೆಗಳು ಮುಚ್ಚುವ ಹಂತದಲ್ಲಿದೆ. ಬಿಟ್ಟಂಗಾಲದ ಅಂಬಟ್ಟಿ ಹಾಗೂ ಅರಮೇರಿಯಲ್ಲಿ ಇರುವ ಸರ್ಕಾರಿ ಶಾಲೆಗಳು ಈಗಾಗಲೇ ಮುಚ್ಚಿವೆ. ಸಿದ್ದಾಪುರ ಪಟ್ಟಣ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಬಹಳ ದಿನಗಳಿಂದ ಕಸದ ರಾಶಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ದುರ್ವಾಸನೆ ಬೀರುತ್ತಿದೆ. ಸಿದ್ದಾಪುರದ ಕಸ ಮತ್ತು ತ್ಯಾಜ್ಯ ನೆಲ್ಲಿಹುದಿಕೇರಿ ಭಾಗದಲ್ಲಿ ಕಾವೇರಿ ನದಿ ಒಡಲಿಗೆ ಸೇರುತ್ತಿದೆ ಎಂದು ಸ್ಥಳೀಯ ಗ್ರಾಮಸ್ಥರು ಗಮನ ಸೆಳೆದರು.
ಹಾಡಿಗಳಲ್ಲಿ ಕುಡಿಯುವ ನೀರಿನ ಪೂರೈಕೆ ಇಲ್ಲದೆ ಜನ ದೂರದ ಪ್ರದೇಶದಿಂದ ನೀರು ತರಬೇಕಾದ ಅನಿವಾರ್ಯತೆ ಎದುರಾಗಿದೆ. ಮಾಲ್ದಾರೆಯಲ್ಲಿರುವ ಪಶು ವೈದ್ಯಕೀಯ ಕೇಂದ್ರ ಕಾರ್ಯ ನಿರ್ವಹಿಸುತ್ತಿಲ್ಲ, ಸಿಬ್ಬಂದಿ ಇಲ್ಲದೆ ಕಟ್ಟಡ ಅನಾಥವಾಗಿದೆ. ಪಾಲಿಬೆಟ್ಟ ಸರ್ಕಾರಿ ಆರೋಗ್ಯ ಕೇಂದ್ರ ಸಿಬ್ಬಂದಿಗಳ ಕೊರತೆಯನ್ನು ಎದುರಿಸುತ್ತಿದೆ. ಹೆಚ್ಚಿನ ರೋಗಿಗಳು ಆಗಮಿಸುತ್ತಿರುವುದರಿಂದ ಇರುವ ವೈದ್ಯರು ಒತ್ತಡದ ನಡುವೆ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿರಾಜಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಳ್ಳದೆ ತ್ಯಾಜ್ಯ ನೇರವಾಗಿ ಕದನೂರು, ಬೇತ್ರಿಯಿಂದ ಕಾವೇರಿ ನದಿಗೆ ಸೇರುತ್ತಿದೆ. ಕಾವೇರಿ ನದಿ ನೀರು ಕಲುಷಿತಗೊಳ್ಳುತ್ತಿದೆ. ಪಟ್ಟಣದಲ್ಲಿ ವಾಹನ ಪಾಕಿರ್ಂಗ್ ವ್ಯವಸ್ಥೆ ಇಲ್ಲದೆ ನಿತ್ಯ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಪಟ್ಟಣವನ್ನು ಕಸ ವಿಲೇವಾರಿ ಸಮಸ್ಯೆ ಕೂಡ ಕಾಡುತ್ತಿದೆ.
ಸಾರ್ವಜನಿಕರ ಲಕ್ಷಾಂತರ ತೆರಿಗೆ ಹಣ ಖರ್ಚು ಮಾಡಿ ನಿರ್ಮಿಸಿದ ಕಸ ವಿಂಗಡಣಾ ಘಟಕದಲ್ಲಿರುವ ಕಂಪ್ರೆಶರ್, ಜೆಸಿಬಿ, ಟ್ಯಾಂಕ್ ಪಿಟ್, ದಾಸ್ತಾನು ಮಳಿಗೆ ಮತ್ತು ಪೌರ ಕಾರ್ಮಿಕರ ವಸತಿಗೃಹ ಪಾಳು ಬಿದ್ದಿದೆ. ಸ್ವಚ್ಛತೆಯ ಯೋಜನೆಯಡಿ ಹಣ ಪೋಲಾಗಿರುವುದು ಕಂಡು ಬಂದಿದೆ ಅತಿ ಹೆಚ್ಚು ವಿಸ್ತೀರ್ಣ ಹೊಂದಿರುವ ಕಸ ವಿಲೇವಾರಿ ಘಟಕ ವಿರಾಜಪೇಟೆ ಪಟ್ಟಣದಲ್ಲಿದೆ. ಆದರೆ ವೈಜ್ಞಾನಿಕ ರೂಪದಲ್ಲಿ ಕಸ ವಿಲೇವಾರಿಯಾಗದೆ ಗಬ್ಬೆದ್ದು ನಾರುತ್ತಿದೆ. ಇಡೀ ಪಟ್ಟಣ ವ್ಯಾಪ್ತಿಯಲ್ಲಿ ದುರ್ವಾಸನೆ ಮಿತಿ ಮೀರುವ ದಿನ ಬಹಳ ದೂರವಿಲ್ಲ. ಮುಂದೊಂದು ದಿನ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿರಾಜಪೇಟೆ ಪಟ್ಟಣದ ಅವ್ಯವಸ್ಥೆ ಹಾಗೂ ಅಶುಚಿತ್ವದ ವಾತಾವರಣದ ಕುರಿತು ಚರ್ಚೆಯಾಗುವುದು ಖಚಿತ ಎಂದು ಭೋಜಣ್ಣ ಸೋಮಯ್ಯ ಆರೋಪಿಸಿದರು.
ಅಮ್ಮತ್ತಿ- ವಿರಾಜಪೇಟೆ -ಗೋಣಿಕೊಪ್ಪ ಮುಖ್ಯ ರಸ್ತೆಯಲ್ಲಿ ವಾಹನಗಳ ವೇಗ ಮಿತಿ ಮೀರಿದೆ, ನಿತ್ಯ ಅಪಘಾತಗಳಿಂದ ಸಾವು ನೋವುಗಳು ಸಂಭವಿಸುತ್ತಿದೆ. ಇತ್ತೀಚೆಗೆ ಬಹಳಷ್ಟು ಸಾವು ನೋವುಗಳು ಸಂಭವಿಸುತ್ತಿದ್ದು, ರಸ್ತೆಯಲ್ಲಿ ಸಂಚರಿಸುವ ಜನ ಭಯಭೀತರಾಗಿದ್ದಾರೆ. ಇಡೀ ವಿರಾಜಪೇಟೆ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿದೆ, ಈಗಾಗಲೇ ಬಾವಿಗಳು ಬತ್ತಿ ಹೋಗಿವೆ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಬಗ್ಗೆ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಂಡು ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕೆಂದು ಆಗ್ರಹಿಸಿದರು.
ಮಾಲ್ದಾರೆ, ಸಿದ್ದಾಪುರ ಮತ್ತು ಚೆನ್ನಂಗಿ ಭಾಗದಲ್ಲಿ ಅರಣ್ಯದಂಚಿನಲ್ಲಿ ಆನೆ, ಕಾಡು ಕೋಣದ ಹಾವಳಿ ಹೆಚ್ಚಾಗಿದೆ. ಆಸ್ಥಾನ ಮತ್ತು ಕಲ್ಲಳ್ಳದ ಹಾಡಿಗಳಲ್ಲಿ ಮೂಲಭೂತ ಸೌಲಭ್ಯದ ಕೊರತೆ ಎದ್ದು ಕಾಣುತ್ತಿದೆ. ವಿರಾಜಪೇಟೆ ತಾಲ್ಲೂಕಿನ ಬಹಳಷ್ಟು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿಗಳ ಕೊರತೆಯಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎನ್ನುವ ದೂರು ಸಾರ್ವಜನಿಕರಿಂದ ಕೇಳಿ ಬಂದಿದೆ. ಮುಂದಿನ ದಿನಗಳಲ್ಲಿ ಆಮ್ ಆದ್ಮಿ ಪಾರ್ಟಿಯ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಅವ್ಯವಸ್ಥೆಗಳ ವಿರುದ್ಧ ಹೋರಾಟ ರೂಪಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಸಾರ್ವಜನಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳ ಸಹಕಾರದಿಂದ ಕೊಡಗು ಆಪ್ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಯಶಸ್ವಿಯಾಗಿದೆ. ಕಳೆದ ಎರಡು ತಿಂಗಳಲ್ಲಿ ಸುಮಾರು 50-60 ಗ್ರಾಮಗಳಿಗೆ ಭೇಟಿ ನೀಡಿ 400ಕ್ಕೂ ಅಧಿಕ ಜನರಿಂದ ಸಮಸ್ಯೆಗಳ ಮಾಹಿತಿ ಪಡೆಯಲಾಗಿದೆ. ಅಲ್ಲದೆ ಗ್ರಾಮಮಟ್ಟದಲ್ಲಿ ಪಕ್ಷ ಸಂಘಟನೆಗೆ ಅಡಿಪಾಯ ಹಾಕಲಾಗಿದೆ. ಮುಂಬರುವ ಚುನಾವಣೆಗಳಲ್ಲಿ ಜನಪರ ಕಾಳಿಜಿಯ ಆಮ್ ಆದ್ಮಿ ಪಾರ್ಟಿಗೆ ಜಿಲ್ಲೆಯ ಜನ ಅಭೂತಪೂರ್ವ ಬೆಂಬಲ ನೀಡಲಿದ್ದಾರೆ ಎಂದು ಭೋಜಣ್ಣ ಸೋಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
Breaking News
- *ಮರಗೋಡಿನಲ್ಲಿ ಗೌಡ ಕುಟುಂಬಗಳ ಟೆನ್ನಿಸ್ ಬಾಲ್ ಕ್ರಿಕೆಟ್*
- *ವನ್ಯ ಜೀವಿ -ಮಾನವ ಸಂಘರ್ಷ ತಪ್ಪಿಸಲು ಎಲ್ಲಾ ಕ್ರಮ : ನಿವೇಶನ ಜಮೀನು ಇಲ್ಲದಿರುವವರಿಗೆ ಸರ್ಕಾರಿ ಭೂಮಿ : ಭಾಗಮಂಡಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ*
- *ತ್ರಿವೇಣಿ ಸಂಗಮ ಮತ್ತು ಶ್ರೀ ಭಗಂಡೇಶ್ವರ ದೇವಾಲಯಕ್ಕೆ ಮುಖ್ಯಮಂತ್ರಿ ಭೇಟಿ*
- *ಸೋಮವಾರಪೇಟೆ : ಚೇಂಬರ್ ಆಫ್ ಕಾಮರ್ಸ್ನ ಸದಸ್ಯರಿಗೆ ಸನ್ಮಾನ*
- *ಕೊಡಗಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನ*
- *ಸೋಮವಾರಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜಿ.ಬಿ.ಸೋಮಯ್ಯ ಆಯ್ಕೆ*
- *ಕೇಂದ್ರ ಬಜೆಟ್ : ಮುಖ್ಯಮಂತ್ರಿಗಳಿಂದ ಬೇಡಿಕೆ ಸಲ್ಲಿಕೆ*
- *ಮಡಿಕೇರಿಯಲ್ಲಿ ಗೀತ ನಮನದ ಮೂಲಕ ಗಾಂಧೀಜಿ ಸ್ಮರಣೆ*
- *ಆತ್ಮಹತ್ಯೆ ಬೇಡ : ಸರ್ಕಾರ ನಿಮ್ಮ ಜೊತೆಗಿದೆ : ಕಂಪ್ಲೇಂಟ್ ಕೊಡಿ : ಸಿಎಂ ಸಿದ್ದರಾಮಯ್ಯ ಕರೆ*
- *ಸುತ್ತೂರು ಮಠದ ಮಹದೇಶ್ವರ ದೇವಾಲಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ*