ಮಡಿಕೇರಿ ಫೆ.17 NEWS DESK : ಮಹಿಳೆಯರ ಮೇಲೆ ದೌರ್ಜನ್ಯ ನಡೆದಾಗ ಅದಕ್ಕಾಗಿಯೇ ರೂಪಿಸಿರುವ ಕಾನೂನನ್ನು ಪ್ರತಿಯೊಬ್ಬ ಮಹಿಳೆಯೂ ಬಳಸಿಕೊಳ್ಳಬೇಕೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್ ತಿಳಿಸಿದರು.
ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಇವರ ಸಹಯೋಗದೊಂದಿಗೆ ನಡೆದ “2023-24 ಸಾಲಿನ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ-2005 ಹಾಗೂ ನಿಯಮ 2006 ಅನುಷ್ಠಾನದಲ್ಲಿ ಭಾಗಿದಾರ ಇಲಾಖೆಗಳ ಪಾತ್ರ ಕುರಿತು 2 ದಿನಗಳ ತರಬೇತಿ ಕಾರ್ಯಾಗಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನನದಿಂದ ಹಿಡಿದು ಮರಣದವರೆಗೂ ಸುಮಾರು 600 ಕಾನೂನನ್ನು ರಚಿಸಲಾಗಿದ್ದು, ಪ್ರತಿಯೊಬ್ಬರಲ್ಲೂ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು. ಯಾವುದೇ ಜಾತಿ, ಧರ್ಮದ ಬೇಧವಿಲ್ಲದೆ ಇಂತಹ ಕಾನೂನು ಅರಿವು ಕಾರ್ಯಕ್ರಮಗಳನ್ನು ಮಹಿಳೆ ಹಾಗೂ ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತಿದೆ ಎಂದು ಕೆ.ಬಿ.ಪ್ರಸಾದ್ ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಮೀನಾಕುಮಾರಿ ಮಾತನಾಡಿ, ನಾಲ್ಕು ಗೋಡೆ ಒಳಗೆ ವಾಸಿಸುತ್ತಿರುವ ಎಲ್ಲಾ ಮಹಿಳೆಗೆ ಈ ಕಾನೂನು ಅನ್ವಯಿಸುತ್ತದೆ. 2007ರಲ್ಲಿ ಶಿಶು ಅಭಿವೃದ್ಧಿ ಅಧಿಕಾರಿಯನ್ನು ಸಂರಕ್ಷಣಾಧಿಕಾರಿಯಾಗಿ ನೇಮಕ ಮಾಡುತ್ತಾರೆ. ಕಾನೂನು ಸೇವಾ ಪ್ರಾಧಿಕಾರದಿಂದ ಒಬ್ಬರು ವಕೀಲರನ್ನು ಸಮಾಲೋಚನೆಗಾಗಿ ನೇಮಿಸಿರುತ್ತಾರೆ. ಹೆಚ್ಚಾಗಿ ಯಾವ ಮಹಿಳೆಯು ದೂರು ನೀಡಲು ಹಿಂಜರಿಯುತ್ತಾರೆ ಅಂತಹ ಮಹಿಳೆಯರು ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆಯರೊಂದಿಗೆ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬಹುದಾಗಿರುತ್ತದೆ ಎಂದು ತಿಳಿಸಿದರು.
ನಂತರ ಸುರೇಶ್ ಎಚ್ ಅವರು ಈ ಕಾಯ್ದೆಯ ಅನುಷ್ಠಾನದ ಬಗ್ಗೆ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸುಮತಿ ಅವರು ಮಕ್ಕಳಿಗೆ ಭಾವನಾತ್ಮಕವಾಗಿ ಮಾತನಾಡಿ, ಕೌನ್ಸೆಲಿಂಗ್ ಮಾಡಬಹುದು ಎಂದರು.
ಇತ್ತೀಚಿನ ದಿನಗಳಲ್ಲಿ ಮಕ್ಕಳ ದೌರ್ಜನ್ಯ ಹಾಗೂ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಪೋಲಿಸ್ ಠಾಣೆಗಳಲ್ಲಿ ದೂರು ಕೊಡಬಹುದು ಎಂದು ತಿಳಿಸಿಕೊಟ್ಟರು.
ಸಂಪನ್ಮೂಲ ವ್ಯಕ್ತಿಗಳಾದ ಕುಮುದಿನಿ ಅವರು ಮಾತನಾಡಿ, ಲೈಂಗಿಕ ದೌರ್ಜನ್ಯ ನಡೆದರೆ. 24 ಗಂಟೆಗಳಲ್ಲಿ ಶಿಕ್ಷಕರು ಮಕ್ಕಳ ವಿಶೇಷ ಪೊಲೀಸರಿಗೆ ಅಥವಾ ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು. ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು. ವಿಳಂಬ ಮಾಡಿದ್ದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವವರು ಶಿಕ್ಷೆಗೆ ಗುರಿಯಾಗಬಹುದು ಎಂದು ತಿಳಿಸಿದರು.
ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಗುವಿನ ವರದಿಯನ್ನು ಯಾವುದೇ ಮಾಧ್ಯಮಗಳ ಮೂಲಕ, ಛಾಯಾ ಚಿತ್ರಗಳ ಮೂಲಕ ಮಗುವನ್ನು ಗುರುತಿಸುವ ಮಾಹಿತಿಯನ್ನು ವರದಿ ಮಾಡಬಾರದು. ಒಂದು ವೇಳೆ ವರದಿ ಮಾಡಿದ್ದಲ್ಲಿ ಮಕ್ಕಳ ವಿಶೇಷ ಪೊಲೀಸರು ಸಂಬಂದಿಸಿದವರ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ನಟರಾಜ ಅವರು, ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯ್ದೆಯಡಿ ಮಹಿಳೆಯರಿಗೆ ನಡೆಯುವ ದೌರ್ಜನ್ಯ, ಡಿಐಆರ್ ಸಲ್ಲಿಕೆ, ಆಪ್ತ ಸಮಾಲೋಚನೆ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಜಿಲ್ಲೆಯ ಮೂರು ತಾಲೂಕಿನ ಸಂರಕ್ಷಣಾಧಿಕಾರಿಗಳು, ಸಾಂತ್ವನ, ಸಖಿ ಒನ್ ಸ್ಟಾಪ್ ಸೆಂಟರಿನ ಸಿಬ್ಬಂದಿಗಳು, ಸಮಾಲೋಚಕರು, ಆರೋಗ್ಯ ಇಲಾಖಾ ಅಧಿಕಾರಿಗಳು ಮತ್ತು ಅಧೀನ ಸಿಬ್ಬಂದಿಗಳು, ಹಾಜರಿದ್ದರು.
ಸೋಮವಾರಪೇಟೆ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕೆ.ಜಿ.ವಿಮಲ ಸ್ವಾಗತಿಸಿದರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಆಡಳಿತಾಧಿಕಾರಿ ಜೋಯಪ್ಪ ನಿರೂಪಿಸಿದರು. ಪಿ.ಕೆ.ಜಯಂತಿ ವಂದಿಸಿದರು.