ಮಡಿಕೇರಿ ಫೆ.18 : ಪಾದಾಚಾರಿಗೆ ವಾಹನ ಡಿಕ್ಕಿಪಡಿಸಿ ಸಾವಿಗೆ ಕಾರಣನಾಗಿರುವುದಲ್ಲದೆ, ವಾಹನ ನಿಲ್ಲಿಸದೆ ಪರಾರಿಯಾಗಿರುವ ಆರೋಪದಡಿ ವಾಹನದ ಮಾಲೀಕನನ್ನು ಕುಶಾಲನಗರ ಸಂಚಾರಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶನಿವಾರಸಂತೆ ಸಮೀಪದ ಹುಲಸೆ ಗ್ರಾಮದ ಶಿರಂಗಾಲ ನಿವಾಸಿ ರಜಾಕ್ ಎಂ.ಎಂ(35) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಪಾದಚಾರಿಗೆ ಡಿಕ್ಕಿಪಡಿಸಿದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೆಬ್ಬಾಲೆ ಗ್ರಾಮದ ರಾಜ್ಯ ಹೆದ್ದಾರಿ 91ರ ರಸ್ತೆಯಲ್ಲಿ ಫೆ.6ರಂದು ಬೆಳಗ್ಗೆ 6.30 ರ ಸಮಯದಲ್ಲಿ ಓರ್ವ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಘಟನಾ ಸ್ಥಳಕ್ಕೆ ಕುಶಾಲನಗರ ನಗರ ಠಾಣೆ, ಸಂಚಾರಿ ಠಾಣಾ ಪೊಲೀಸರು ಹಾಗೂ ಸೀನ್ ಆಫ್ ಕ್ರೈಂ ತಂಡದ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದ್ದರು.
ಈ ಸಂದರ್ಭ ವ್ಯಕ್ತಿ ವಾಹನ ಅಪಘಾತದಲ್ಲಿ ಮೃತಪಟ್ಟಿರುವುದು ಖಚಿತವಾಗಿತ್ತು. ಆತ ಮೂಲತಃ ಮೂಲ್ಕಿ ಮೂಲದ ಫೆಲಿಕ್ಸ್ ಡಿಸೋಜಾ ಎಂದು ಗುರುತು ಪತ್ತೆ ಮಾಡಿ ಬಳಿಕ ಮೃತದೇಹವನ್ನು ಆತನ ವಾರಸುದಾರರಿಗೆ ಹಸ್ತಾಂತರಿಸಲಾಗಿತ್ತು. ಈ ‘ಹಿಟ್ ಆ್ಯಂಡ್ ರನ್’ ಪ್ರಕರಣದ ಕುರಿತು ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಾಹನ ಡಿಕ್ಕಿ ಹೊಡೆದು ವ್ಯಕ್ತಿಯ ಸಾವಿಗೆ ಕಾರಣವಾಗಿ ತಲೆಮರೆಸಿಕೊಂಡಿದ್ದ ಆರೋಪಿಯ ಪತ್ತೆಗಾಗಿ ಸೋಮವಾರಪೇಟೆ ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ಪಟ್ಟಣ ಠಾಣೆಯ ಉಪ ನಿರೀಕ್ಷಕ ಬಿ.ಜಿ.ಪ್ರಕಾಶ್, ಸಂಚಾರಿ ಪೊಲೀಸ್ ಠಾಣೆಯ ಉಪ ನಿರೀಕ್ಷಕಿ ಕುಸುಮ ಮತ್ತು ಸಿಬ್ಬಂದಿಗಳ ಒಂದು ತಂಡವನ್ನು ರಚಿಸಲಾಗಿತ್ತು. ಸ್ಥಳದಲ್ಲಿ ದೊರೆತ ಮಾಹಿತಿ ಹಾಗೂ ಕೆಲವು ಸಾಕ್ಷಿಗಳ ಸಹಿತ ತನಿಖೆ ನಡೆಸಿದ ಪೊಲೀಸರು ಆರೋಪಿ ರಜಾಕ್‌ನನ್ನು ಬಂಧಿಸಿದ್ದಾರೆ. ಅಪಘಾತಕ್ಕೆ ಕಾರಣವಾಗಿದೆ ಎನ್ನಲಾದ ಕಾರನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.










