ಮಡಿಕೇರಿ ಫೆ.22 NEWS DESK : ಗೋಣಿಕೊಪ್ಪ ಕೊಡವ ಸಮಾಜದ ಸಮುದಾಯ ಭವನಕ್ಕೆ ಅನುದಾನ ನೀಡುವಂತೆ ಗೋಣಿಕೊಪ್ಪ ಕೊಡವ ಸಾಂಸ್ಕೃತಿಕ ಕೇಂದ್ರದ ಆಡಳಿತ ಮಂಡಳಿಯ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮನವಿ ಮಾಡಿದೆ.
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಗೋಣಿಕೊಪ್ಪ ಕೊಡವ ಸಾಂಸ್ಕೃತಿಕ ಕೇಂದ್ರದ ಆಡಳಿತ ಮಂಡಳಿಯ ಪ್ರಮುಖರು ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು.
ಕೊಡಗಿನ ಪ್ರತಿಷ್ಠಿತ ಪಟ್ಟಣವಾದ ಗೋಣಿಕೊಪ್ಪಲ್ಲಿನಲ್ಲಿ ಕೊಡವ ಕಲೆ, ಸಂಸ್ಕೃತಿ, ಆಚಾರ, ವಿಚಾರಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಕೊಡವ ಸಮಾಜ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಇಲ್ಲಿ ಕೊಡವ ಜನಾಂಗದವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಮುದಾಯ ಭವನವನ್ನು ನಿರ್ಮಿಸಲಾಗುತ್ತಿದೆ. ಇಷ್ಟರವರೆಗೆ ಈ ಸಮುದಾಯ ಭವನದ ಕಾಮಗಾರಿಗಳಿಗೆ ಸುಮಾರು 1 ಕೋಟಿ 50 ಲಕ್ಷ ರೂ. ಗಳನ್ನು ವೆಚ್ಚ ಮಾಡಲಾಗಿದೆ. ಅಂದಾಜು 8.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡಕ್ಕೆ ಹಣಕಾಸಿನ ತೊಂದರೆಯಿಂದ ಕಾಮಗಾರಿಯು ಸದ್ಯಕ್ಕೆ ನಿಂತುಹೋಗಿದೆ ಎಂದು ಗಮನ ಸೆಳೆದರು.
ಸಮುದಾಯ ಭವನ ಪೂರ್ಣಗೊಳಿಸಲು 8 ಕೋಟಿ 50 ಲಕ್ಷ ರೂಗಳ ಅನುದಾನ ಅವಶ್ಯಕತೆ ಇದ್ದು, ಸರ್ಕಾರದಿಂದ ಅನುದಾನ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭ ಆಡಳಿತ ಮಂಡಳಿ ಅಧ್ಯಕ್ಷ ಎ.ಸಿ.ಪೂಣಚ್ಚ, ಉಪಾಧ್ಯಕ್ಷ ಸಿ.ಪಿ.ಪೂಣಚ್ಚ, ಕಾರ್ಯದರ್ಶಿ ಸಿ.ಡಿ.ಮಾದಪ್ಪ, ಜಂಟಿ ಕಾರ್ಯದರ್ಶಿ ರೀಟಾ ದೇಚಮ್ಮ, ಖಜಾಂಚಿ ಕೆ.ಸಿ.ಬಿದ್ದಪ್ಪ, ನಿರ್ದೇಶಕಿ ಬಿದ್ದಂಡ ಪ್ರೇಮ ಹಾಗೂ ಸಮಾಜದ ಖಾಯಂ ನಿರ್ದೇಶಕರು ಹಾಗೂ ಪೂಮಾಲೆ ಪತ್ರಿಕೆಯ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ ಹಾಜರಿದ್ದರು.








