ಸೋಮವಾರಪೇಟೆ ಫೆ.22 NEWS DESK : ಬೆಳೆಗಾರರು ಗುಣಮಟ್ಟದ ಕಾಫಿ ಉತ್ಪಾದನೆಗೆ ಒತ್ತು ನೀಡಬೇಕು ಎಂದು ಕಾಫಿ ಮಂಡಳಿ ಉಪನಿರ್ದೇಶಕರಾದ ಡಾ.ಚಂದ್ರಶೇಖರ್ ಅಭಿಪ್ರಾಯಿಸಿದರು.
ಕಾಫಿ ಮಂಡಳಿ ವತಿಯಿಂದ ನಾಕೂರು-ಶಿರಂಗಾಲ ಮೂಲೆಮನೆ ಎಸ್ಟೇಟ್ ನಲ್ಲಿ ನಡೆದ ಕಾಫಿ ತೋಟದಲ್ಲಿ ಮಣ್ಣಿನ ಪೋಷಕಾಂಶ ನಿರ್ವಹಣೆ ಹಾಗು ಕಾಫಿ ತಳಿ ಅಭಿವೃದ್ಧಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕೊಳ್ಳುವವರು ಗುಣಮಟ್ಟದ ಕಾಫಿಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಅವರ ರುಚಿಗೆ ಅನುಗುಣವಾಗಿ ಕಾಫಿಯನ್ನು ಕೊಟ್ಟಾಗ ಮಾತ್ರ ಬೇಡಿಕೆ ಹೆಚ್ಚಾಗಿ ಉತ್ತಮ ಬೆಲೆಯನ್ನು ನಿರೀಕ್ಷೆ ಮಾಡಬಹುದು ಎಂದು ಹೇಳಿದರು.
ವರ್ಲ್ಡ್ ಕಾಫಿ ಕಾನ್ಫೆರೆನ್ಸ್ ನಡೆದ ಮೇಲೆ ಭಾರತದ ಕಾಫಿ ಗುಣಮಟ್ಟದಿಂದ ಕೂಡಿದೆ ಎಂಬ ಅಭಿಪ್ರಾಯ ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತವಾಗಿದೆ. ಈ ಕಾರಣದಿಂದ ಪ್ರತಿಯೊಬ್ಬ ಬೆಳೆಗಾರನೂ ಕಾಫಿ ಗುಣಮಟ್ಟ ಕಾಯ್ದುಕೊಳ್ಳುವುದಕ್ಕೆ ಪ್ರಯತ್ನ ಮುಂದುವರಿಸಬೇಕು ಎಂದು ಕಿವಿ ಮಾತು ಹೇಳಿದರು.
ಕಾಫಿ ಭೂಮಿ ಕಡಿಮೆಯಾಗುತ್ತಿದೆ. ಇದ್ದ ಭೂಮಿಯಲ್ಲೇ ಕಡಿಮೆ ಉತ್ಪಾದನಾ ವೆಚ್ಚದಲ್ಲಿ ಗುಣಮಟ್ಟದ ಕಾಫಿ ಬೆಳೆಯುವ ಪ್ರಯತ್ನ ಮಾಡಬೇಕು. ಕಾಫಿ ಮಂಡಳಿ ಬೆಳೆಗಾರರಿಗೆ ಎಲ್ಲಾ ರೀತಿಯ ಸಹಕಾರ ಹಾಗು ಸಬ್ಸಿಡಿಯಲ್ಲಿ ಸೌಲಭ್ಯ ನೀಡುತ್ತದೆ ಎಂದು ಭರವಸೆ ನೀಡಿದರು.
ಮೂಲೆಮನೆ ಎಸ್ಟೇಟ್ ಹಾಗು ಸೌತ್ ಇಂಡಿಯ ಕಾಫಿ ಕಂಪೆನಿಯ ಮಾಲೀಕ ಅಕ್ಷಯ್ ದಶರಥ್ ಅವರು, ಸ್ಪೆಷಾಲಿಟಿ ಕಾಫಿ ಉತ್ಪಾದನೆ, ಗುಣಮಟ್ಟ ಕಾಯ್ದುಕೊಳ್ಳುವುದು, ರುಚಿ ಹಾಗು ಮಣ್ಣಿನ ಗುಣಕ್ಕೆ ತಕ್ಕದಾದ ತಳಿ ಆಯ್ಕೆ, ಭವಿಷ್ಯದ ಕಾಫಿ ಗಿಡದ ತಳಿಗಳ ಬಗ್ಗೆ ಮಾಹಿತಿ ನೀಡಿದರು. ತಮ್ಮ ಜಾಗದಲ್ಲಿ ನೆಟ್ಟಿರುವ ವಿವಿಧ ದೇಶಗಳ 11 ತಳಿಗಳ ಬಗ್ಗೆ ಕಾಫಿ ಬೆಳೆಗಾರರಿಗೆ ಮಾಹಿತಿ ನೀಡಿದರು. ವಿದೇಶ ತಳಿಗಳಿಗೆ, ಸ್ಥಳೀಯ ತಳಿಗಳನ್ನು ಕಸಿ ಕಟ್ಟುವ ಬಗೆಗಿನ ಮಾಹಿತಿಯನ್ನು ಹಂಚಿಕೊಂಡರು. ವಿದೇಶಕ್ಕೆ ರಪ್ತು ಮಾಡುವ ಕಾಫಿ ಬೀಜ ಸಂಸ್ಕರಣೆಯ ಬಗ್ಗೆ ತಿಳಿಸಿಕೊಟ್ಟರು.
ಮಣ್ಣು ವಿಜ್ಞಾನಿ ಡಾ.ನದಾಫ್ ಮಾತನಾಡಿ, ಮಣ್ಣಿನ ರಸಸಾರಕ್ಕೆ ಅನುಗುಣವಾಗಿ ರಾಸಾಯನಿಕ ಗೊಬ್ಬರವನ್ನು ಹಾಕಿದರೆ ಮಾತ್ರ ಉತ್ತಮ ಇಳುವರಿ ಸಾಧ್ಯ ಎಂದು ಹೇಳಿದರು. ಮಣ್ಣಿನ ಪರೀಕ್ಷೆಯನ್ನು ಪ್ರತಿಯೊಬ್ಬ ಬೆಳೆಗಾರರು ಮಾಡಿಸಿ, ರಸಗೊಬ್ಬರ ಹಾಕಿದರೆ ಮಾತ್ರ ಉತ್ಪಾದನಾವೆಚ್ಚ ಕಡಿಮೆಯಾಗುತ್ತದೆ. ಮಣ್ಣು ಪರೀಕ್ಷೆ ಮಾಡದೆ ವಿಪರೀತ ರಸಗೊಬ್ಬರ ಹಾಕಿದರೆ ಮಣ್ಣು ಹಾಳಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲಿ 2 ವರ್ಷಕೊಮ್ಮೆ ಮಣ್ಣು ಪರೀಕ್ಷೆ ಮಾಡಿಸಬೇಕು. ಕಡಿಮೆ ಮಳೆ ಬೀಳುವ ಜಾಗದಲ್ಲಿ ಎರಡು ವರ್ಷಕೊಮ್ಮೆ ಪರೀಕ್ಷೆ ಮಾಡಿಸಬೇಕು ಎಂದು ಹೇಳಿದರು. ಸುಣ್ಣ ಬಳಕೆಯ ಒಂದು ತಿಂಗಳ ನಂತರ ರಸಗೊಬ್ಬರ ಹಾಕಿದರೆ ಒಳ್ಳೆಯದು ಎಂದು ಹೇಳಿದರು.
ಕಾರ್ಯಾಗಾರದಲ್ಲಿ ನಾವು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು ಮತ್ತು ಸದಸ್ಯರು, ಭಾಗವಹಿಸಿದ್ದರು. ಪ್ರಗತಿಪರ ಕೃಷಿಕರು ತಮ್ಮ ಕಾಫಿ ಕೃಷಿಯ ಅನುಭವ ಹಂಚಿಕೊಂಡರು. ಕಾಫಿ ಮಂಡಳಿಯ ವಿಸ್ತರಣಾಧಿಕಾರಿಗಳಾದ ರಂಜಿತ್ ಕುಮಾರ್, ಅಮಿ ಮೇರಿ, ಕೃಷ್ಣಕುಮಾರ್, ಲಕ್ಷ್ಮೀಕಾಂತ್, ಸೌತ್ ಇಂಡಿಯಾ ಕಾಫಿ ಕಂಪೆನಿಯ ತೇಜ್, ಸನ್ನಿ, ರತನ್ ಇದ್ದರು.
Breaking News
- *ಫೆ.7 ರ ಪಾದಯಾತ್ರೆಗೆ ಸಿಎನ್ಸಿ ಬೆಂಬಲ*
- *ಕೊಡಗು : ಕಾರ್ಮಿಕರ ಸಾಮಾಜಿಕ ಭದ್ರತಾ ಕುರಿತು ಜನಜಾಗೃತಿ : ಆಟೋ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ*
- *ಜಿಲ್ಲೆಯ ಸಮಗ್ರ ಮಾಹಿತಿ ಹೊಂದಿರುವ ಅಧಿಕೃತ ವೆಬ್ಸೈಟ್ ಬಿಡುಗಡೆ*
- *ಕೊಡಗಿಗೆ ಸಚಿವ ಸ್ಥಾನ ನೀಡಲು ಒತ್ತಾಯ*
- *ಮರಗೋಡಿನಲ್ಲಿ ಗೌಡ ಕುಟುಂಬಗಳ ಟೆನ್ನಿಸ್ ಬಾಲ್ ಕ್ರಿಕೆಟ್*
- *ತಲಕಾವೇರಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ*
- *ವನ್ಯ ಜೀವಿ -ಮಾನವ ಸಂಘರ್ಷ ತಪ್ಪಿಸಲು ಎಲ್ಲಾ ಕ್ರಮ : ನಿವೇಶನ ಜಮೀನು ಇಲ್ಲದಿರುವವರಿಗೆ ಸರ್ಕಾರಿ ಭೂಮಿ : ಭಾಗಮಂಡಲದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ*
- *ತ್ರಿವೇಣಿ ಸಂಗಮ ಮತ್ತು ಶ್ರೀ ಭಗಂಡೇಶ್ವರ ದೇವಾಲಯಕ್ಕೆ ಮುಖ್ಯಮಂತ್ರಿ ಭೇಟಿ*
- *ಸೋಮವಾರಪೇಟೆ : ಚೇಂಬರ್ ಆಫ್ ಕಾಮರ್ಸ್ನ ಸದಸ್ಯರಿಗೆ ಸನ್ಮಾನ*
- *ಕೊಡಗಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮನ*