ಸೋಮವಾರಪೇಟೆ ಫೆ.22 NEWS DESK : ಪುಷ್ಪಗಿರಿ ಜೆಸಿಐ ಸೋಮವಾರಪೇಟೆ ವತಿಯಿಂದ ತೋಳೂರು ಶೆಟ್ಟಳ್ಳಿಯ ಡಾ. ಬಿ. ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ‘ಪರೀಕ್ಷೆ ಒಂದು ಹಬ್ಬ, ಪರೀಕ್ಷೆಯನ್ನು ಎದುರಿಸುವುದು ಹೇಗೆ’ ಎಂಬ ವಿಷಯದ ಕುರಿತಾದ ತರಬೇತಿ ಕಾರ್ಯಾಗಾರವನ್ನು ಬುಧವಾರ ಏರ್ಪಡಿಸಿಲಾಗಿತ್ತು. ಜೇಸಿಐ ವಲಯ 14 ರ ತರಬೇತುದಾರ ಪ್ರಶಾಂತ್ ಕುಂಬಾರ್ ಶೆಟ್ಟಿ ಹೆಮ್ಮಕ್ಕಿ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷಾ ಜ್ವರವನ್ನು ಹತ್ತಿಸಿಕೊಳ್ಳಬಾರದು. ಪರೀಕ್ಷಾ ಭಯದಿಂದ ಹೊರಬರಬೇಕು. ಕೇವಲ ಪುನಾರಾವರ್ತಿತ ಓದಿನಿಂದ ಎಲ್ಲವೂ ಸಿಗುವುದಿಲ್ಲ. ಓದಿನ ಮಧ್ಯೆ ವಿಶ್ರಾಂತಿ ಕೂಡ ಅಗತ್ಯ ಎಂದು ಹೇಳಿದರು.
ಕಂಪ್ಯೂಟರ್, ಟಿ.ವಿ. ಸ್ಮಾರ್ಟ್ಫೋನ್, ಪರೀಕ್ಷೆ ಮುಗಿಯುವ ವರೆಗೆ ವಿದಾಯ ಹೇಳಬೇಕು. ಏಕಾಗ್ರತೆ ಹೆಚ್ಚಿಸಿಕೊಳ್ಳಬೇಕು. ಮೆದುಳಿಗೆ ಅಯಾಸವಾಗದಂತೆ ನೋಡಿಕೊಳ್ಳಿ, ಪರೀಕ್ಷೆಯೇನೂ ಜೀವನದ ಅಂತಿಮವಲ್ಲ. ಪ್ರಶ್ನೆ ಪತ್ರಿಕೆ ನೋಡಿದ ತಕ್ಷಣ ಗೊಂದಲ ಬೇಡ, ಓದಿ ಅರ್ಥೈಸಿಕೊಂಡು ಉತ್ತರ ಕಂಡುಕೊಳ್ಳಿ, ಪರೀಕ್ಷೆಯನ್ನು ಸಂಭ್ರಮದಿAದ ಬರೆಯಬೇಕು ಎಂದು ಹೇಳಿದರು.
ಜೇಸಿಐ ಅಧ್ಯಕ್ಷ ಎಸ್.ಆರ್.ವಸಂತ್, ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ, ತರಬೇತಿ ವಿಭಾಗದ ಜ್ಯೋತಿ ರಾಜೇಶ್, ಜೇಸಿಐ ಕಾಯದರ್ಶಿ ಜಗದಾಂಭ ಗುರುಪ್ರಸಾದ್, ಮಹಿಳಾ ಘಟಕದ ಅಧ್ಯಕ್ಷ ವಿನುತಾ ಸುದೀಪ್ ಮತ್ತಿತರರು ಇದ್ದರು.










