ಸೋಮವಾರಪೇಟೆ ಮಾ.7 NEWS DESK : 4.80 ಕೋಟಿ ರೂ ವೆಚ್ಚದ ಹಾನಗಲ್ಲು ಗ್ರಾಮದ ದುದ್ದುಗಲ್ಲು ಶ್ರೀ ಮಲ್ಲಿಕಾರ್ಜುನ ದೇವಾಲಯದ ಅಭಿವೃದ್ಧಿ ಕಾಮಗಾರಿಗೆ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮತ್ತು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಭೂಮಿ ಪೂಜೆ ನೆರವೇರಿಸಿದರು.
ದೇವಾಲಯದ ನೀಲನಕ್ಷೆಯಂತೆ ದುದ್ದುಗಲ್ಲು ಹೊಳೆಯಿಂದ ದೇವಾಲಯದವರೆಗೆ ಮೆಟ್ಟಿಲು ಹಾಗೂ ರಸ್ತೆ ನಿರ್ಮಾಣ ಆಗಬೇಕಿರುವ ಹಿನ್ನೆಲೆ, ರಾಜ್ಯ ಜಲಸಂಪನ್ಮೂಲ ಇಲಾಖಾ ಸಚಿವ ಡಿ.ಕೆ. ಶಿವಕುಮಾರ್ ಅವರ ಗಮನ ಸೆಳೆದ ಹಿನ್ನೆಲೆ ಕಾಮಗಾರಿಗೆ 4.80 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಇದರಲ್ಲಿ ಕಾಂಕ್ರಿಟ್ ರಸ್ತೆ, ಸೋಪಾನಂ ಕಟ್ಟೆ, ತಡೆಗೋಡೆ, ಫೆನ್ಸಿಂಗ್, ಇಂಟರ್ ಲಾಕ್, ವಾಹನ ನಿಲುಗಡೆಗೆ ಸ್ಥಳಾವಕಾಶ ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕ ಮಂಥರ್ ಗೌಡ ಹೇಳಿದರು.
ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶ್ರೀ ಶಂಭುನಾಥ ಸ್ವಾಮೀಜಿ ಅವರು, ಶಾಶ್ವತವಾಗುವಂತಹ ಕ್ಷೇತ್ರವನ್ನಾಗಿ ಮಲ್ಲಿಕಾರ್ಜುನ ಸ್ವಾಮಿ ದೇವಾಲಯವನ್ನು ನಿರ್ಮಿಸಲಾಗುವುದು. ಇದರೊಂದಿಗೆ ಮಠವನ್ನೂ ನಿರ್ಮಿಸಿ, ದಾಸೋಹ, ಯಾತ್ರಿ ನಿವಾಸ, ಧಾರ್ಮಿಕ ಕಾರ್ಯಗಳಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಮುಂದಿನ ವರ್ಷದ ಶಿವರಾತ್ರಿ ಸಂದರ್ಭ ಕ್ಷೇತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡು ಶಿವರಾತ್ರಿ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸಲು ಕಾರ್ಯಯೋಜನೆ ರೂಪಿಸಲಾಗಿದೆ ಎಂದರು.
ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ಜಲಸಂಪನ್ಮೂಲ ಇಲಾಖೆಯ ಕಾರ್ಯಪಾಲಕ ಅಭಿಯಂತರ ದೇವೇಗೌಡ, ಗ್ರಾಮದ ಪ್ರಮುಖರಾದ ಮಿಥುನ್ ಹಾನಗಲ್ಲು, ಹಾನಗಲ್ಲು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ವಿಕ್ರಾಂತ್, ಹಾನಗಲ್ಲು ಗ್ರಾ.ಪಂ. ಅಧ್ಯಕ್ಷ ಯಶಾಂತ್ಕುಮಾರ್, ಜಿ.ಪಂ. ಮಾಜಿ ಸದಸ್ಯ ಬಿ.ಜೆ. ದೀಪಕ್, ಗುತ್ತಿಗೆದಾರ ಜಯರಾಂ ಇದ್ದರು.