ನಾಪೋಕ್ಲು ಮಾ.12 NEWS DESK : ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ಕುಂಬ್ಯಾರ್ ಕಲಾಡ್ಚ ವಾರ್ಷಿಕೋತ್ಸವವು ಮಾ.23 ರಂದು ನಡೆಯಲಿದೆ ಎಂದು ದೇವಾಲಯದ ತಕ್ಕಮುಖ್ಯಸ್ಥರು, ಭಕ್ತಜನ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಯುಕ್ತ ಮಾ.10ರಂದು ಆದಿಸ್ಥಾನ ಮಲ್ಮದಲ್ಲಿ ಸಂಪ್ರದಾಯದಂತೆ ಪೂರ್ವಬಾದ್ರ ನಕ್ಷತ್ರದ ಸಮಯದಲ್ಲಿ ಕಟ್ಟುಬೀಳಲಾಯಿತು. ಮಾರ್ಚ್ 23ರ ಶನಿವಾರ ಬೆಳ್ಳಿಗೆ ದೇವತಕ್ಕರಾದ ಪರದಂಡ ಕುಟುಂಬಸ್ಥರು ಹಾಗೂ ಬಟ್ಯತ್ ವಕ್ಕ ಪೇರಿಯಂಡ ಕುಟುಂಬಸ್ಥರ ಹಾಗೂ ಸಂಬಂಧಪಟ್ಟ ಇತರ ಕುಟುಂಬಸ್ಥರ ಜೋಡೆತ್ತು ಪೋರಾಟ, ಪಾಲ್ ಬೈಯ್ಯಾಡ್ ನೊಂದಿಗೆ ಶಾಸ್ತ್ರೋಕ್ತವಾಗಿ ಕಲಾಡ್ಚ ಹಬ್ಬ ಪ್ರಾರಂಭವಾಗುವುದು. ಮಧ್ಯಾಹ್ನ ನಿತ್ಯ ಪೂಜೆಯೊಂದಿಗೆ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನೆರವೇರಲಿದೆ.
ನಂತರ ಚಂಡೆ ಮದ್ದಳೆಯೊಂದಿಗೆ ದೇವರ ಉತ್ಸವ ಮೂರ್ತಿ ಯನ್ನು ಮೆರವಣಿಗೆಯಲ್ಲಿ ಆದಿಸ್ಥಾನ ಮಲ್ಮಗೆ ಕೊಂಡೊಯ್ಯುವರು. ಅಲ್ಲಿ ಸಾಂಪ್ರದಾಯಿಕ ದುಡಿಕೊಟ್ಟ್ ಪಾಟ್ ನೊಂದಿಗೆ ಪಾಡಿ, ನೆಲಜಿ, ಪೇರೂರಿನ ತಕ್ಕ ಮುಖ್ಯಸ್ತರು ಕೂಡಿ ಎತ್ತ್ ಪೋರಾಟ ಸೇವೆ, ಪಾಲ್ ಬೈಯ್ಯಾಡ್ ನ ಪಾಯಸಮಾಡಿ ಪ್ರಸಾದವಾಗಿ ಅರ್ಪಿಸುವರು.
ಮುಸ್ಸಂಜೆ ವೇಳೆಗೆ ವಿವಿಧ ಪೂಜಾ ಕೈಂಕರ್ಯದೊಂದಿಗೆ ಉತ್ಸವಮೂರ್ತಿಯನ್ನು ಪಾಡಿ ದೇವಾಲಯಕ್ಕೆ ತಂದು ದೇವಾಲಯದಲ್ಲಿ ಉತ್ಸವ ಮೂರ್ತಿಯನ್ನು ಹೊತ್ತು ನೃತ್ಯಮಾಡುವ ಮೂಲಕ ಉತ್ಸವಕ್ಕೆ ತೆರೆಬೀಳುವುದು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯದ ಭಕ್ತಜನಸಂಘ ದ ಪದಾಧಿಕಾರಿಗಳು ಹಾಗೂ ತಕ್ಕ ಮುಖ್ಯಸ್ಥರು ಕೋರಿದ್ದಾರೆ.
ವರದಿ : ದುಗ್ಗಳ ಸದಾನಂದ.








