ಮಡಿಕೇರಿ ಮಾ.31 NEWS DESK : ಕೊಡಗು ಜಿಲ್ಲೆಯಲ್ಲಿ ಕಾಡಾನೆ ಉಪಟಳ ಮಿತಿ ಮೀರಿದ್ದು, ಒಂದೇ ತಿಂಗಳಲ್ಲಿ ನಾಲ್ಕನೇ ಮಾನವ ಜೀವ ಬಲಿಯಾಗಿದೆ. ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಸಮೀಪದ ಹೊಸಗುತ್ತಿ ಗ್ರಾಮದ ತೋಟದಲ್ಲಿ ಇಂದು ಬೆಳಿಗ್ಗೆ ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಜೀವ ಕಳೆದುಕೊಂಡಿದ್ದಾರೆ. ಸ್ಥಳೀಯ ನಿವಾಸಿ ಕಾಂತರಾಜು (48) ಮೃತ ದುರ್ದೈವಿಯಾಗಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣವಿದೆ. ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಮೃತ ಕಾಂತರಾಜು ಅವರ ಮನೆಗೆ ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು. ಕಾಡಾನೆ ಉಪಟಳದ ವಿರುದ್ಧ ಸೂಕ್ತ ಕ್ರಮಕ್ಕೆ ಅರಣ್ಯ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು. ಸರಕಾರದಿಂದ ಸಿಗಬೇಕಾದ ಪರಿಹಾರದ ಮೊತ್ತ ಶೀಘ್ರ ಸಿಗಲಿದೆ ಎಂದರು. ಕಾಡಾನೆ ದಾಳಿಯ ಕುರಿತು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
::: 4 ನೇ ಸಾವು :::
ಕೊಡಗು ಜಿಲ್ಲೆಯಲ್ಲಿ ಮಾರ್ಚ್ ತಿಂಗಳಿನಲ್ಲಿ ಕಾಡಾನೆ ದಾಳಿಯಿಂದ ಈಗಾಗಲೇ ಮೂವರು ಮೃತಪಟ್ಟಿದ್ದು, ಕಾಂತರಾಜು ಅವರು ನಾಲ್ಕನೇಯವರಾಗಿದ್ದಾರೆ. ಈ ಹಿಂದೆ ಮಡಿಕೇರಿ ತಾಲ್ಲೂಕಿನ ನಿಶಾನಿಬೆಟ್ಟದಲ್ಲಿ ಅಪ್ಪಚ್ಚು, ವಿರಾಜಪೇಟೆಯ ಚೆನ್ನಂಗಿ ಅಬ್ಬೂರು ಗ್ರಾಮದಲ್ಲಿ ಅಜಬಾನು ಎಂಬ ಮಹಿಳೆ ಹಾಗೂ ಕಕ್ಕಬ್ಬೆಯಲ್ಲಿ ರಾಜ ದೇವಯ್ಯ ಎಂಬುವವರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಿದ್ದರು. ವಿವಿಧ ಕಡೆ ನಡೆದ ದಾಳಿಯಲ್ಲಿ ಅನೇಕರು ಜೀವ ಉಳಿಸಿಕೊಂಡಿದ್ದಾರೆ, ಮತ್ತೆ ಕೆಲವರು ಗಾಯಾಳುಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಫಿ ತೋಟಗಳಿಗೆ ಅಪಾರ ಹಾನಿಯಾಗಿದ್ದು, ಬೆಳೆಗಾರರು ನಷ್ಟ ಅನುಭವಿಸುತ್ತಿದ್ದಾರೆ.











