ಮಡಿಕೇರಿ ಏ.9 NEWS DESK : ಕಾವೇರಿಯ ಉಗಮಸ್ಥಾನ ಕೊಡಗಿನಲ್ಲಿ ಮಳೆ ಬಾರದೆ ತಾಪಮಾನ ಮಿತಿಮೀರಿದೆ. ಹೂಮಳೆಗಾಗಿ ಎದುರು ನೋಡುತ್ತಿರುವ ಜನ ಮಳೆ ಬಾರದೆ ಕಂಗಾಲಾಗಿದ್ದಾರೆ. ಕೃಷಿ ಕ್ಷೇತ್ರ ಸಂಪೂರ್ಣ ಹಾನಿಗೊಳಗಾಗಿದ್ದು, ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಕುಶಾಲನಗರ ಸಮೀಪದ ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು ಹೊರಭಾಗದಲ್ಲಿರುವ ಬಪ್ಪುರಾಯ ಸ್ವಾಮಿ ದೇವರಿಗೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದರು. ಇಲ್ಲಿ ಪ್ರಾರ್ಥನೆ ಸಲ್ಲಿಸಿದರೆ ಮಳೆ ಸುರಿಯುತ್ತದೆ ಎನ್ನುವ ನಂಬಿಕೆ ಗ್ರಾಮಸ್ಥರದ್ದು. ಗ್ರಾಮದ ಪ್ರಗತಿ ಪರ ಕೃಷಿಕ ಹೆಚ್.ಎಸ್.ಮಹೇಶ್ ಮಾತನಾಡಿ ಈ ಬಾರಿಯ ಪರಿಸ್ಥಿತಿ ಯಾವತ್ತೂ ಬಂದಿರಲಿಲ್ಲ, ಬರ ಇಡೀ ನಾಡನ್ನು ಆವರಿಸಿದೆ. ನದಿ, ಕೆರೆ ಸೇರಿದಂತೆ ಕೊಳವೆ ಬಾವಿಗಳು ಬತ್ತಿವೆ. ಜೀವ ನದಿ ಕಾವೇರಿ ಸಂಪೂರ್ಣ ಒಣಗುತ್ತಿದೆ. ಹಾಗಾಗಿ ಮಳೆ ಸುರಿಸಿ ನಾಡಿನ ಜನರನ್ನು ಉದ್ಧರಿಸು ಎಂದು ಗ್ರಾಮದ ರೈತರು ಹಾಗೂ ಗ್ರಾಮಸ್ಥರೊಂದಿಗೆ ಮಳೆಯ ದೇವರನ್ನು ಪ್ರಾರ್ಥಿಸಿದ್ದಾಗಿ ಹೇಳಿದರು. ಮಹಾಪೂಜೆಯ ನಂತರ ಅನ್ನಸಂತರ್ಪಣೆಯಾಯಿತು. ಪೂಜಾ ಕೈಂಕರ್ಯದಲ್ಲಿ ಮರೂರು ಗ್ರಾಮಸ್ಥರು ಭಾಗವಹಿಸಿದ್ದರು.