ಮಡಿಕೇರಿ ಮೇ 6 NEWS DESK : ಕೊಡಗು ಜಿಲ್ಲೆಯ 5 ತಾಲ್ಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳಾಗಿ ಘೋಷಣೆ ಮಾಡಿದ್ದು ಜಿಲ್ಲೆಯ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗದಂತೆ ಜಿಲ್ಲಾಡಳಿತದ ಸಹಕಾರದೊಂದಿಗೆ ಎಲ್ಲಾ ಮುಂಜಾಗ್ರತಾ ಕ್ರಮವಹಿಸಲಾಗಿದೆ.
ಜಿಲ್ಲೆಯಲ್ಲಿ 20 ನೇ ಜಾನುವಾರು ಗಣತಿಯ ಪ್ರಕಾರ 76920 ಜಾನುವಾರುಗಳು 8553 ಕುರಿ ಮತ್ತು ಮೇಕೆಗಳಿದ್ದು, ಸದ್ಯದ ಮಟ್ಟಿಗೆ ಜಿಲ್ಲೆಯಲ್ಲಿ ಮೇವಿನ ಕೊರತೆ ಕಂಡು ಬಂದಿರುವುದಿಲ್ಲ. ಮುಂಜಾಗ್ರತಾ ಕ್ರಮವಾಗಿ ಮೇವಿನ ಕೊರತೆ ಉಂಟಾಗದಂತೆ ಮೇವಿನ ಬೀಜಗಳ 476 ಎಟಿಎಂ ಹಾಗೂ 309 ಸೋರ್ಗಂ ಮಿನಿ ಕಿಟ್‍ಗಳನ್ನು ಆಸಕ್ತ ನೀರಾವರಿ ಸೌಲಭ್ಯ ಇರುವ ಜಾನುವಾರು ಹೊಂದಿದ ರೈತಬಾಂಧವರಿಗೆ ವಿತರಿಸಲಾಗುತ್ತಿದ್ದು, ಇದರಲ್ಲಿ ಎ.ಟಿ.ಎಂ, ಏಕವಾರ್ಷಿಕ ಬೆಳೆಯಾಗಿದ್ದು ಮತ್ತು ಸೋರ್ಗಂ ಬಹುವಾರ್ಷಿಕ ಬೆಳೆಯಾಗಿರುತ್ತದೆ.
ಮೇವು ಬೀಜಗಳನ್ನು ಬಿತ್ತನೆ ಮಾಡಿದ 60 ರಿಂದ 75 ದಿನದೊಳಗೆ ಮೇವು ಕಟಾವಿಗೆ ಬರುತ್ತದೆ. ನಂತರ 2 ತಿಂಗಳಿಗೊಂದಾವರ್ತಿಯಂತೆ ಮೂರ್ನಾಲ್ಕು ಬಾರಿ ಮೇವು ಕಟಾವು ಮಾಡಬಹುದಾಗಿದೆ. ಹಾಗೆಯೇ ಜಿಲ್ಲೆಯಲ್ಲಿ ಏ.1 ರಿಂದ ಮೇ 10 ರವರೆಗೆ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ವಿರುದ್ದ ಲಸಿಕಾ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಪಶುಪಾಲನಾ ಇಲಾಖೆಯ ಉಪ ನಿರ್ದೇಶರಾದ ಡಾ ಎಚ್.ಲಿಂಗರಾಜ್ ದೊಡ್ಡಮನಿ ತಿಳಿಸಿದ್ದಾರೆ.
ಆಸಕ್ತ ರೈತರು ತಮ್ಮ ತಾಲ್ಲೂಕಿಗೆ ಸಂಬಂಧಿಸಿದಂತೆ ಸಹಾಯಕ ನಿರ್ದೇಶಕರು ಪಶುವೈದ್ಯ ಆಸ್ಪತ್ರೆ ಮಡಿಕೇರಿ 9448647276, ಸಹಾಯಕ ನಿರ್ದೇಶಕರು ಪಶುವೈದ್ಯ ಆಸ್ಪತ್ರೆ ಸೋಮವಾರಪೇಟೆ 9448597496, ಸಹಾಯಕ ನಿರ್ದೇಶಕರು ಪಶುವೈದ್ಯ ಆಸ್ಪತ್ರೆ ಕುಶಾಲನಗರ 9448422269, ಸಹಾಯಕ ನಿರ್ದೇಶಕರು ಪಶುವೈದ್ಯ ಆಸ್ಪತ್ರೆ ವಿರಾಜಪೇಟೆ 9141093996, ಸಹಾಯಕ ನಿರ್ದೇಶಕರು ಪಶುವೈದ್ಯ ಆಸ್ಪತ್ರೆ ಪೊನ್ನಂಪೇಟೆ 9480616717 ಅವರನ್ನು ಸಂಪರ್ಕಿಸಿ ತಮ್ಮ ಆಧಾರ್ ಕಾರ್ಡ್, ಆರ್‍ಟಿಸಿ ಹಾಗೂ ಫ್ರೂಟ್ ಐಡಿ ಪ್ರತಿಗಳನ್ನು ಸಲ್ಲಿಸಿ ಮೇವಿನ ಕಿರು ಪೊಟ್ಟಣಗಳನ್ನು ಪಡೆಯಬಹುದು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.