





ಮಡಿಕೇರಿ ಮೇ 10 NEWS DESK : ಎಮ್ಮೆಮಾಡು ಗ್ರಾ.ಪಂ ವ್ಯಾಪ್ತಿಯ ನೆಲಜಿ ಪಡಿಯಾನಿ ಜಂಕ್ಷನ್ ನಿಂದ ಎಮ್ಮೆಮಾಡು ದರ್ಗಾದವರೆಗಿನ ರಸ್ತೆ ಕೊನೆಗೂ ಅಭಿವೃದ್ಧಿ ಹೊಂದಿದೆ.
ಸುಮಾರು 3 ಕಿ.ಮೀ ದೂರದ ರಸ್ತೆ ಹದಗೆಟ್ಟು 20 ವರ್ಷಗಳೇ ಕಳೆದಿತ್ತು. ರಸ್ತೆ ಅಭಿವೃದ್ಧಿಗಾಗಿ ಹಲವು ಬಾರಿ ಮನವಿ ಮಾಡಿಕೊಂಡರೂ ಯಾರೂ ಕೂಡ ರಸ್ತೆ ಕಾಮಗಾರಿ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು, ವಿಧಾನಸಭಾ ಚುನಾವಣೆ ಸಂದರ್ಭ ನೀಡಿದ ಭರವಸೆಯಂತೆ ನಡೆದುಕೊಂಡಿದ್ದಾರೆ. ಇದೀಗ ರಸ್ತೆ ಅಭಿವೃದ್ಧಿಪಡಿಸಿ ದೊಡ್ಡ ಉಪಕಾರ ಮಾಡಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ಎಮ್ಮೆಮಾಡು ವಲಯ ಕಾಂಗ್ರೆಸ್ ಅಧ್ಯಕ್ಷ ಹಂಸ ಪಡಿಯಾನಿ ಮಾತನಾಡಿ ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ. ಶಾಸಕರ ಅನುದಾನ ಒದಗಿಸಿ ರಸ್ತೆ ಅಭಿವೃದ್ಧಿಗೆ ಆಸಕ್ತಿ ತೋರಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಅಭಿನಂದನಾರ್ಹರು. ಉಳಿದ ರಸ್ತೆಗಳ ಅಭಿವೃದ್ಧಿ ಕಾರ್ಯವನ್ನು ಕೂಡ ಕೈಗೆತ್ತಿಕೊಳ್ಳುವುದಾಗಿ ಶಾಸಕರು ಭರವಸೆ ನೀಡಿದ್ದಾರೆ ಎಂದರು.
ರಸ್ತೆ ಕಾಮಗಾರಿಗೆ ಕಾಳಜಿ ತೋರಿದ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ ಹಾಗೂ ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಅವರಿಗೆ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.