ಸೋಮವಾರಪೇಟೆ ಮೇ 17 NEWS DESK : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಹೊಂಡಕ್ಕೆ ಉರುಳಿ ಮನೆಯ ಮೇಲೆ ಬಿದ್ದಿರುವ ಘಟನೆ ಹೊಸತೋಟ ಗ್ರಾಮದಲ್ಲಿ ನಡೆದಿದೆ.
ಸೋಮವಾರಪೇಟೆಯಿಂದ ಮಡಿಕೇರಿಗೆ ತೆರಳುತ್ತಿದ್ದ ಕಾಗಡಿಕಟ್ಟೆಯ ಸೂರ್ಯ ಎಂಬಾತ ಚಾಲಿಸುತ್ತಿದ್ದ ಕಾರು ಹೊಸತೋಟದ ತಿರುವಿನಲ್ಲಿ ನಿಯಂತ್ರಣ ತಪ್ಪಿ ಎಡಬದಿಯ ಗುಂಡಿಗೆ ಮಗುಚಿಕೊಂಡಿದೆ. ಪರಿಣಾಮ ಸನಿಹದಲ್ಲಿಯೇ ಇದ್ದ ಖತೀಜ ಎಂಬುವವರ ಮನೆಗೆ ಹಾನಿಯಾಗಿದ್ದು, ಕಾರಿನ ಮುಂಭಾಗ ಜಖಂಗೊಂಡಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ.
ಹೊಸತೋಟದ ತಿರುವಿನಲ್ಲಿ ಆಗಾಗ್ಗೆ ಇಂತಹ ಅವಘಡಗಳು ಸಂಭವಿಸುತ್ತಿದ್ದು, ಲೋಕೋಪಯೋಗಿ ಇಲಾಖೆ ಇತ್ತ ಗಮನ ಹರಿಸಿ ರಸ್ತೆ ಬದಿಗೆ ಕ್ರಾಸ್ ಬ್ಯಾರಿಯರ್ ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಹರದೂರು ಗ್ರಾ.ಪಂ.ಸದಸ್ಯ ಸಲೀಂ ಆಗ್ರಹಿಸಿದ್ದಾರೆ.










