ಮಡಿಕೇರಿ ಮೇ 27 NEWS DESK : ಕೊಡಗಿನ ಕಾವೇರಿ ಮಾತೆಯ ಸ್ಪೂರ್ತಿಯೊಂದಿಗೆ, ಕೈಯಲ್ಲಿ ಹಾಕಿ ಸ್ಟಿಕ್ ಹಿಡಿದು, ಸದೃಢತೆಯೊಂದಿಗೆ ಕೊಡಗಿನ ಹೆಮ್ಮೆಯ ಸಂಕೇತವಾಗಲು, ಸವಾಲುಗಳನ್ನು ಮೀರಿ, ಮಹಿಳಾ ಶಕ್ತಿಯಾಗಿ ಬೆಳದಿದ್ದಾಳೆ. ಅವಳು ಕೇವಲ ಆಟಗಾರ್ತಿಯಲ್ಲ, ಹಲವು ಯುವ ಹಾಕಿ ಆಟಗಾರ್ತಿಯರಿಗೆ ದಾರಿ ದೀಪ, ಅಂತಹ ಒಬ್ಬಳು ಅಂತರಾಷ್ಟ್ರೀಯ ಹಾಕಿ ಆಟಗಾರ್ತಿಯೇ ಪಟ್ಟಮಾಡ ಜಮುನ ಅನೂಪ್.
ಕೆಚ್ಚೆಟ್ಟೀರ ಬೆಳ್ಳಿಯಪ್ಪ ಹಾಗು ಬೇಬಿ(ತಾಮನೆ ನಂದಿನೆರುವಂಡ) ದಂಪತಿಯರ ಪುತ್ರಿಯಾಗಿ ಜಮುನ ಅವರು ಮಡಿಕೇರಿಯ ಕಡಗದಾಳು ಗ್ರಾಮದಲ್ಲಿ ಜನಿಸಿದರು.
ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಡಗದಾಳಿನಲ್ಲಿ ಮುಗಿಸಿ, ಪ್ರೌಢ ಶಿಕ್ಷಣವನ್ನು ಗೋಣಿಕೊಪ್ಪಲಿನಲ್ಲಿ, ಪಿಯುಸಿಯನ್ನು ಕಾವೇರಿ ಕಾಲೇಜು ಗೋಣಿಕೊಪ್ಪಲು ಹಾಗೂ ಪದವಿಯನ್ನು ತೆರೆಸಿಯನ್ ಕಾಲೇಜು ಮೈಸೂರಿನಲ್ಲಿ ಪೂರ್ಣಗೊಳಿಸಿದರು.
ಬಾಲ್ಯದಲ್ಲಿ ಹಾಕಿಯ ಬಗ್ಗೆ ಆಸಕ್ತಿ ಹಾಗೂ ಕೌತುಕವನ್ನು ಹೊಂದಿದ್ದ ಜಮುನಾ ಅವರು ಹಾಕಿಯನ್ನು ಆಡಲು ಪ್ರಾರಂಭಿಸಿದ್ದರು. ಅವರ ಈ ಆಸಕ್ತಿಯೇ ಅವರನ್ನು ಅಂತರಾಷ್ಟ್ರೀಯ ಹಾಕಿ ಆಟಗಾರ್ತಿಯಾಗಲು ಪ್ರೇರೇಪಿಸಿತು.
:: ಸಬ್ ಜೂನಿಯರ್ ನ್ಯಾಷನಲ್ ::
ಜಮುನ ಅವರು 1979ರ ಬಿಹಾರ ಹಾಗೂ 1980ರ ಆಂಧ್ರಪ್ರದೇಶದಲ್ಲಿ ನಡೆದ ಸಬ್ ಜೂನಿಯರ್ ನ್ಯಾಷನಲ್ಸ್ ನಲ್ಲಿ ಕರ್ನಾಟಕದ ಪರ ಆಡಿದರು. ಹೀಗೆ ಆಡುತ್ತ ಪ್ರಭಾಕರ್ ಅವರ ತರಬೇತಿಯಲ್ಲಿ ಮೈಸೂರು ಕ್ರೀಡಾ ವಸತಿ ನಿಲಯಕ್ಕೆ ಪ್ರವೇಶ ಪಡೆದರು.
:: ರಾಷ್ಟ್ರ ಮಟ್ಟದಲ್ಲಿ ಸಾಧನೆ ::
ಹೈದರಾಬಾದ್, ದೆಹಲಿ, ಗುಜರಾತ್, ಕೊಯಂಬತ್ತೂರ್, ಚಂಡೀಗಢ ದಲ್ಲಿ ನಡೆದ ರಾಷ್ಟ್ರೀಯ ಮಹಿಳಾ ಕ್ರೀಡಾಕೂಟದಲ್ಲಿ, ಮೈಸೂರು ದಸರಾ ಕ್ರೀಡಾಕೂಟ ಹಾಗೂ ಬೆಂಗಳೂರು ಕ್ಲಬ್ ಮ್ಯಾಚ್ ನಲ್ಲಿ ಭಾಗವಹಿಸಿ ವಿಜೇತರಾಗಿದ್ದರು.
ಕರ್ನಾಟಕ ತಂಡದ ಪರ ದೆಹಲಿ, ಜಮ್ಮು ಕಾಶ್ಮೀರ, ಚಂಡೀಗಢ ಹಾಗೂ ಮೂರು ವರ್ಷಗಳ ಕಾಲ ಮೈಸೂರು ಯುನಿವರ್ಸಿಟಿ ಹಾಗು ಮಹಾರಾಷ್ಟ್ರದ ತಂಡಗಳ ಪರವಾಗಿಯೂ ನ್ಯಾಷನಲ್ ಗೇಮ್ಸ್ ನಲ್ಲಿ ಆಡಿದರು.
ಆಲ್ ಇಂಡಿಯಾ ಕೋಚಿಂಗ್ ಕ್ಯಾಂಪ್ ನಲ್ಲಿ 1984-86 ರಲ್ಲಿ ಭಾಗವಹಿಸಿದ್ದರು. 1986-87ರಲ್ಲಿ ಏರ್ ಇಂಡಿಯ ಮುಂಬೈ ಗೆ ಸೇರ್ಪಡೆಗೊಂಡರು. ಇಂಡಿಯನ್ ಯುನಿವರ್ಸಿಟಿ,1983 ಶಿಮ್ಲಾ ಹಾಗೂ 1986-87 ತ್ರಿವಂದ್ರಮ್ ನಲ್ಲಿ ಕ್ಯಾಪ್ಟನ್ ಆಗಿ ಕರ್ನಾಟಕ ತಂಡದ ಪರ ಸೀನಿಯರ್ ನ್ಯಾಷನಲ್ಸ್ ನಲ್ಲಿ ಆಡಿ ವಿಜೇತರಾಗಿ ಹೊರಹೊಮ್ಮಿದರು.
1991-96 ವರೆಗೆ ಏರ್ ಇಂಡಿಯಾ ಫೆಡರೇಶನ್ ಕಪ್, 1990-93 ರವರೆಗೆ ಲೇಡಿ ಕಾಶಿನಾಥ್ ಆಲ್ ಇಂಡಿಯಾ ಟೂರ್ನಮೆಂಟ್, 1989-92 ರವರೆಗೆ ಗಂಗೋತ್ರಿ ದೇವಿ ಟೂರ್ನಮೆಂಟ್ 1988ರಿಂದ 1995 ರವರೆಗೆ ಭಾಗವಹಿಸಿ ಮಹಿಳಾ ಹಾಕಿ ಆಟಗಾರರಲ್ಲಿ ಸ್ಪೂರ್ತಿ ತುಂಬಿದರು.
:: ಅಂತರಾಷ್ಟ್ರೀಯ ಪಂದ್ಯಾಟಗಳು ::
ಕೆನಡಾಡಲ್ಲಿ ನಡೆದ ಗೋವಾ ಗೋಲ್ಡ್ ಕಪ್ ಹಾಕಿ ಟೂರ್ನಮೆಂಟ್ ನಲ್ಲಿ 1988, 89, 92, 93 ರಲ್ಲಿ ಭಾಗವಹಿಸಿ ವಿಜೇತರಾದರು. 1993ರಲ್ಲಿ ಕೆನಡಾ ಪ್ರವಾಸ, ಬ್ಯಾಂಕಾಕ್ ನಲ್ಲಿ 1994 ಹಾಗು 1995ರಲ್ಲಿ ಥಾಯ್ ರಾಷ್ಟ್ರೀಯ ತಂಡದೊಡನೆ ಟೆಸ್ಟ್ ಸರಣಿಯ ವಿಜೇತರು ಹಾಗು ಸಿಂಗಾಪುರದಲ್ಲಿ ನಡೆದ 10ನೇ ಎಸ್.ಸಿ.ಸಿ ಅಂತರಾಷ್ಟ್ರೀಯ ಹಾಕಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಗಳಿಸಿದರು. 1985 ರ ನವದೆಹಲಿಯಲ್ಲಿ ನಡೆದ ಇಂದಿರಾ ಗಾಂಧಿ ಅಂತರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
:: ಪ್ರಶಸ್ತಿಗಳು ::
ಅತ್ಯುತ್ತಮ ಸೆಂಟರ್ ಫಾರ್ವರ್ಡ್ ಪ್ರಶಸ್ತಿ ಹಾಗೂ ಹಲವಾರು ಪಂದ್ಯಾವಳಿಗಳಲ್ಲಿ ಅತೀ ಹೆಚ್ಚು ಗೋಲು ಭಾರಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
:: ಕುಟುಂಬವೇ ಕ್ರೀಡಾಪಟುಗಳು ::
ಇವರ ಅಣ್ಣ ರವಿ ದೇವಯ್ಯ 10 ವರ್ಷಗಳ ಕಾಲ ಕರ್ನಾಟಕ ತಂಡದ ಪರ ಬಾಸ್ಕೆಟ್ ಬಾಲ್ ಆಡಿದ ಕೊಡಗಿನ ಪ್ರತಿಭಾವಂತ ಬಾಸ್ಕೆಟ್ ಬಾಲ್ ಆಟಗಾರ ಹಾಗು H.A.L ನ ನಿವೃತ್ತ ಉದ್ಯೋಗಿ. ಇವರ ಅಕ್ಕ ಬಾಳೆಯಡ ಗೌರು ಅಪ್ಪಯ್ಯ ಕೂಡ ರಾಜ್ಯದ ಅದ್ಭುತ ಬಾಸ್ಕೆಟ್ ಬಾಲ್ ಆಟಗಾರ್ತಿ.
ಗಿನ್ನಿಸ್ ದಾಖಲೆಗೆ ಶುಭ ಹಾರೈಕೆ
ಇತ್ತೀಚೆಗೆ ನಡೆದ ಕುಡ್ಯೋಳಂಡ ಹಾಕಿ ಹಬ್ಬದ ಅಂತರಾಷ್ಟ್ರೀಯ ಹಾಗು ರಾಷ್ಟ್ರೀಯ ಆಟಗಾರರ ಸಮ್ಮಿಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ, ಗಿನ್ನಿಸ್ ದಾಖಲೆಗೆ ಸೇರ್ಪಡೆಗೊಂಡಿದ್ದಕ್ಕೆ ಹರ್ಷವನ್ನು ವ್ಯಕ್ತಪಡಿಸುತ್ತಾ, ಕುಡ್ಯೋಳಂಡ ಕುಟುಂಬಕ್ಕೆ ಶುಭ ಕೋರಿದರು.
:: ಸ್ನೇಹಿತರ ಅನಿಸಿಕೆ ::
ಜಮುನ ಬಹಳಷ್ಟು ಚುರುಕು, ಗೋಲ್ ಹೊಡೆಯುವುದರಲ್ಲಿ ನಿಪುಣತೆಯನ್ನು ಹೊಂದಿದ್ದರು. ಮತ್ಸ್ಯ ಹೇಗೆ ಸಾಗರದಲ್ಲಿ ಮುನ್ನುಗ್ಗುತ್ತದೋ, ಹಾಗೆಯೇ ಕೊಡಗಿನ ಕುವರಿ ಮಿನುಗಿದಳು. ಕುಡ್ಯೋಳಂಡ ಹಾಕಿ ಹಬ್ಬದ ಸ್ನೇಹಮಿಲನದಲ್ಲಿ ಪಾಲ್ಗೊಂಡು, ಎಲ್ಲರೊಡನೆ ಬೆರೆತು ಬಹಳಷ್ಟು ಖುಷಿಯಿಂದ ತನ್ನ ಜೀವನ ಸಾರ್ಥಕವೆಂದು ಸ್ನೇಹಿತರೊಡನೆ ಹಂಚಿಕೊಂಡರು.
ಏರ್ ಇಂಡಿಯಾದ ಕಸ್ಟಮರ್ ಸರ್ವಿಸ್ ಆಫೀಸರ್ ಆಗಿದ್ದ ಇವರು ಅದರಿಂದ ಸ್ವಯಂ ನಿವೃತ್ತಿ ಪಡೆದರು. ಪ್ರಸ್ತುತ ಜಮುನ ಅವರು ಹಾಕಿ ಕರ್ನಾಟಕದ ಉಪಾಧ್ಯಕ್ಷರು . ಇವರ ಪತಿ ಅನೂಪ್ ಹಾಗೂ ಮಗಳು ಶಿಮೋನ್ ಬೊಳ್ಳಮ್ಮ ಅವರೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರ ಕೊಡುಗೆ ಕೊಡಗಿನ ಹಾಕಿಯತ್ತವು ಇರಲಿ ಎಂಬುದು ನಮ್ಮೆಲ್ಲರ ಅನಿಸಿಕೆ.
ಕ್ರೀಡಾ ವಿಶ್ಲೇಷಣೆ : ಚೆಪ್ಪುಡೀರ ಕಾರ್ಯಪ್ಪ